ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು, ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
86 ವರ್ಷದ ಅಸಾರಾಂ ಅವರು ಅಪರಾಧಿ ಎಂದು ಗುಜರಾತ್‌ನ ನ್ಯಾಯಾಲಯ 2023ರ ಜನವರಿಯಲ್ಲಿ ತೀರ್ಪು ನೀಡಿತ್ತು. ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಇದೇ ವರ್ಷದ ಆಗಸ್ಟ್‌ನಲ್ಲಿ ತಿರಸ್ಕರಿಸಿತ್ತು.
ವಕೀಲರಾದ ರಾಜೇಶ್ ಇನಾಂದಾರ್ ಮತ್ತು ಶಾಶ್ವತ್ ಅನಂದ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ವೈದ್ಯಕೀಯ ಅಥವಾ ಸ್ವತಂತ್ರ ಸಾಕ್ಷ್ಯಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ತಮ್ಮ ಪ್ರತಿಷ್ಠೆಯನ್ನು ಹಾಳು ಮಾಡಲು ಮತ್ತು ಆಶ್ರಮದಿಂದ ಹೊರಹಾಕಲು ಸುಳ್ಳು ಆರೋಪ ಹೊರಿಸಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.
ಹಲವು ಬಾರಿ ಹೃದಯಾಘಾತಕ್ಕೆ ಒಳಗಾಗಿರುವುದು ಮತ್ತು ಅವರು ಎದುರಿಸುತ್ತಿರುವ ತೀವ್ರ ಆರೋಗ್ಯ ಸಮಸ್ಯೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿ, ‘ನಿರಂತರ ಜೈಲುವಾಸವು ಸಂವಿಧಾನದ 14, 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದಿದೆ.
‘ಜೈಲಿನಲ್ಲಿ ಕಳೆಯುವ ಪ್ರತಿಯೊಂದು ದಿನವೂ ಅವರ ಆರೋಗ್ಯ ಮತ್ತು ಘನತೆಯನ್ನು ಕುಗ್ಗಿಸುತ್ತದೆ. ಅವರು ಈಗಾಗಲೇ 11 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಇನ್ನಷ್ಟು ದಿನ ಜೈಲಿನಲ್ಲಿದ್ದರೆ, ಬಾಕಿ ಉಳಿದಿರುವ ಅರ್ಜಿಗಳ ವಿಚಾರಣೆ ಎದುರಿಸಲು ಅವರು ಬದುಕಿರಲಾರರು’ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.