ನವದೆಹಲಿ(ಪಿಟಿಐ):ರೋಹಿಂಗ್ಯಾ ಸಮುದಾಯದವರನ್ನುರಾಷ್ಟ್ರ ರಾಜಧಾನಿಯ ಅಪಾರ್ಟ್‌ಮೆಂಟ್‌ಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿದವರನ್ನು ಪತ್ತೆಮಾಡಲು ತನಿಖೆಗೆ ಆದೇಶಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ಪತ್ರ ಬರೆದಿದ್ದಾರೆ.
‘ನಾವಂತೂ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರ ಕೂಡ ಅಂತಹ ನಿರ್ಧಾರ ತೆಗೆದುಕೊಂಡಿಲ್ಲವೆಂದು ಹೇಳುತ್ತಿದೆ. ಮತ್ತೆ ಯಾರು ಈ ಸೂಚನೆ ನೀಡಿದವರು’ ಎಂದು ಪ್ರಶ್ನಿಸಿರುವ ಸಿಸೋಡಿಯಾ, ಈ ನಿರ್ಧಾರದ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ರೋಹಿಂಗ್ಯಾ ಸಮುದಾಯದವರ ಸ್ಥಳಾಂತರದ ಬಗ್ಗೆ ಕೇಂದ್ರದ ನಿಲುವು ಸ್ಪಷ್ಟಪಡಿಸುವಂತೆಯೂ ಗೃಹ ಸಚಿವರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.
ಕೇಂದ್ರನಗರಾಭಿವೃದ್ಧಿಸಚಿವ ಹರ್ದೀಪ್ ಸಿಂಗ್ ಪುರಿ ಅವರು ರೋಹಿಂಗ್ಯಾ ಸಮುದಾಯದವರನ್ನು ಸ್ಥಳಾಂತರಿಸುವ ನಿರ್ಧಾರವನ್ನು ಬುಧವಾರ ಟ್ವಿಟರ್‌ನಲ್ಲಿ ಪ್ರಕಟಿಸಿದರು. ಇದಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿತು ಎಂದು ಸಿಸೋಡಿಯಾ ಹೇಳಿದರು.
ಕೇಜ್ರಿವಾಲ್ ಸರ್ಕಾರದ ವಿರುದ್ಧ ಬಿಜೆಪಿ ಆರೋಪ
ರಾಷ್ಟ್ರ ರಾಜಧಾನಿಯಲ್ಲಿ ರೋಹಿಂಗ್ಯಾ ಸಮುದಾಯದವರಿಗೆ ನೆಲೆ ಕಲ್ಪಿಸುವ ವಿಚಾರದಲ್ಲಿ ವಿವಾದ ಮುಂದುವರಿದಿದ್ದು, ಬಿಜೆಪಿ ದೆಹಲಿ ಘಟಕವು, ‘ಒಳ ನುಸುಳುಕೋರರಿಗೆ ಇಡಬ್ಲ್ಯುಎಸ್ ಫ್ಲ್ಯಾಟ್‌ಗಳಲ್ಲಿ ಕಾಯಂ ಪುನರ್ವಸತಿ ಕಲ್ಪಿಸುವಂತೆ ಕೇಜ್ರಿವಾಲ್ ಸರ್ಕಾರದ ಅಧಿಕಾರಿಗಳೇ ಪದೇ ಪದೇ ಪತ್ರ ಬರೆದಿದ್ದಾರೆ’ ಎಂದು ಎಎಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ.
ನಗರದಲ್ಲಿ ನೆಲೆಸಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರಿಗೆವಿದ್ಯುತ್ ಸಂಪರ್ಕ ಸೇರಿ ಅಗತ್ಯ ಮೂಲ ಸೌಕರ್ಯವನ್ನು ಕೇಜ್ರಿವಾಲ್ ಸರ್ಕಾರ ಒದಗಿಸಿಲ್ಲ. ಆದರೆ, ರೋಹಿಂಗ್ಯಾ ವಲಸಿಗರಿಗೆ ಸೂಕ್ತ ವಸತಿ, ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದೆ ಎಂದು ಬಿಜೆಪಿದೆಹಲಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಆರೋಪಿಸಿದ್ದಾರೆ.
ಕೇಂದ್ರದ ವಿರುದ್ಧ ತರೂರ್ ತರಾಟೆ:
‘ರೋಹಿಂಗ್ಯಾ ವಲಸಿಗರಿಗೆ ಆಶ್ರಯ ಕಲ್ಪಿಸುವ ಕುರಿತ ಕೇಂದ್ರ ಸರ್ಕಾರದ ಗೊಂದಲದ ಹೇಳಿಕೆಗಳು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್‌ನ (ಯುಎನ್‌ಎಚ್‌ಸಿಆರ್) ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿದ ರಾಷ್ಟ್ರಕ್ಕೆ ಆದ ಅವಮಾನ’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
‘ಸಾವಿರಾರು ವರ್ಷಗಳಿಂದ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ ಹೆಮ್ಮೆಯ, ಮಾನವೀಯ ಪರಂಪರೆ ಹೊಂದಿದ್ದೇವೆ. ಬಿಜೆಪಿಯವರೇ, ದಯವಿಟ್ಟು ಭಾರತೀಯ ನಾಗರಿಕತೆಗೆ ದ್ರೋಹ ಬಗೆಯಬೇಡಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ತರೂರ್ ಅವರುರೋಹಿಂಗ್ಯಾ ನಿರಾಶ್ರಿತರ ಸ್ಥಳಾಂತರ ಸಂಬಂಧ ಕೇಂದ್ರ ಸಚಿವರ ಹೇಳಿಕೆ ಮತ್ತು ಸರ್ಕಾರದ ನಿರಾಕರಣೆಯ ಕುರಿತ ಮಾಧ್ಯಮ ವರದಿಯನ್ನು ಸಹ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.