ADVERTISEMENT

ಪಂಢರಪುರ ವಿಠಲ-ರುಕ್ಮಿಣಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 10:51 IST
Last Updated 17 ಜುಲೈ 2024, 10:51 IST
<div class="paragraphs"><p>ಮಹಾರಾಷ್ಟ್ರದ ಪಂಢರಪುರದಲ್ಲಿರುವ ವಿಠಲ–ರುಕ್ಮಿಣಿ ಮಂದಿರಕ್ಕೆ ಬುಧವಾರ ಭೇಟಿ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ದಂಪತಿ ದರ್ಶನ ಪಡೆದರು</p></div>

ಮಹಾರಾಷ್ಟ್ರದ ಪಂಢರಪುರದಲ್ಲಿರುವ ವಿಠಲ–ರುಕ್ಮಿಣಿ ಮಂದಿರಕ್ಕೆ ಬುಧವಾರ ಭೇಟಿ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ದಂಪತಿ ದರ್ಶನ ಪಡೆದರು

   

ಪ್ರಜಾವಾಣಿ ಚಿತ್ರ

ಪಂಢರಪುರ (ವಿಜಯಪುರ): ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ಬುಧವಾರ ಪಂಢರಪುರಕ್ಕೆ ಭಕ್ತ ಸಾಗರವೇ ಹರಿದು ಬಂದಿತು.

ADVERTISEMENT

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ರಾಜ್ಯಗಳ ಲಕ್ಷಾಂತರ ಭಕ್ತರು ಪಂಢರಪುರಕ್ಕೆ ಆಗಮಿಸಿ, ಇಲ್ಲಿನ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ವಿಠಲನ ದರ್ಶನ ಪಡೆದರು.

ಸಂಪ್ರದಾಯದಂತೆ ಮಹಾರಾಷ್ಟ್ರ ಸರ್ಕಾರದ ಪ್ರಥಮ ಪೂಜೆಯನ್ನು ಮುಖ್ಯಮಂತ್ರಿ ಏಕನಾಥ ಶಿಂಧೆ ದಂಪತಿ ನೆರವೇರಿಸಿದರು.

ತುಳಸಿ ಮಾಲೆ ಧರಿಸಿದ ಸಂತರು, ತಲೆಯ ಮೇಲೆ ತುಳಸಿಕಟ್ಟೆ ಹೊತ್ತು, ಹೆಜ್ಜೆ ಹಾಕುತ್ತಾ ಕೈ ಕೈ ಹಿಡಿದುಕೊಂಡು ಕುಣಿದು ಸಂಭ್ರಮಿಸಿ ಪಂಢರಿನಾಥನಿಗೆ ಜೈಕಾರ ಹಾಕಿದರು.

ಪಂಢರಪುರದ ಪ್ರಮುಖ ಬೀದಿಗಳಲ್ಲಿ ಸಂಜೆ ವಿಠಲ ರುಕ್ಮಿಣಿ ಪಲ್ಲಕ್ಕಿ ಉತ್ಸವ ನಡೆಯಿತು. ಏಕಾದಶಿ ಅಂಗವಾಗಿ ವಾರಕಾರಿ ಸಪ್ತಾಹ ಜರುಗಿತು.

ಅಭಂಗಗಳನ್ನು ಹಾಡುತ್ತಾ ಕುಣಿಯುತ್ತ ಭಜನೆ, ನಾಮ ಸಂಕೀರ್ತನೆಗಳಲ್ಲಿ ಭಕ್ತರು ಮೈಮರೆತರು. ಲಕ್ಷೋಪಲಕ್ಷ ಭಕ್ತರು ಪಾದಯಾತ್ರೆ, ವಾಹನಗಳ ಮೂಲಕ ವಿಠಲನ ಸನ್ನಿಧಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಪಂಢರಪುರದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿತ್ತು. ದೇವಸ್ಥಾನದಲ್ಲಿ ವಿಠಲನ ದರ್ಶನಕ್ಕೆ ಭಕ್ತರು ಮುಗಿಬಿದ್ದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು, ಸ್ವಯಂ ಸೇವಕರು ಹರಸಾಹಸ ಪಟ್ಟರು.

ಯಾತ್ರಿಕರಿಗೆ ಉಚಿತ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಚಂದ್ರಭಾಗ ನದಿ ತೀರದಲ್ಲಿ ಭಕ್ತರು ಪುಣ್ಯಸ್ನಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಭಕ್ತರು ಸಿಹಿ ತಿನಿಸು, ವಿಠಲ-ರುಕ್ಷ್ಮಿಣಿಯರ ಮೂರ್ತಿ, ಪೂಜಾ ಸಾಮಾಗ್ರಿ, ಮಕ್ಕಳ ಆಟಿಕೆಗಳನ್ನು ಖರೀದಿಸಿದರು. ವ್ಯಾಪಾರ, ವಹಿವಾಟು ಜೋರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.