ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಭಾನುವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮುಂದೆ ಶರಣಾದರು.
ಜಾಮೀನು ಅವಧಿ ಮುಗಿಯುವ ಒಂದು ದಿನ ಮುಂಚಿತವಾಗಿ ಮಿಶ್ರಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.
2021ರ ಫೆಬ್ರುವರಿಯಲ್ಲಿ ಅಲಹಾಬಾದ್ ಹೈಕೋರ್ಟ್ ಆಶಿಶ್ ಮಿಶ್ರಾ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಆಶಿಶ್ ಮಿಶ್ರಾ ಅವರ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ರೈತರು ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 4ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿತ್ತು. ಬಳಿಕ ಏ.18ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ಪೀಠ, ಮಿಶ್ರಾ ಅವರಿಗೆ ಮಂಜೂರಾಗಿದ್ದ ಜಾಮೀನನ್ನು ರದ್ದುಪಡಿಸಿತ್ತು ಮತ್ತು ಒಂದು ವಾರದೊಳಗೆ ಶರಣಾಗುವಂತೆ ಹೇಳಿತ್ತು.
ಮಿಶ್ರಾ ಅವರಿಗೆ ಜಾಮೀನು ನೀಡಿರುವ ಅಲಹಾಬಾದ್ ಹೈಕೋರ್ಟ್‌ನಲ್ಲಿ ಹಿಂಸಾಚಾರದ ಸಂತ್ರಸ್ತರಿಗೆ ವಿಚಾರಣೆಯ ಹಕ್ಕನ್ನು ನಿರಾಕರಿಸಲಾಗಿದೆ ಎಂಬುದನ್ನು ಗಮನಿಸಿರುವ ತ್ರಿಸದಸ್ಯ ಪೀಠ, ಆಶಿಶ್ ಮಿಶ್ರಾಗೆ ನೀಡಿರುವ ಜಾಮೀನನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ಗೆ ತಿಳಿಸಿತ್ತು.
ಕಳೆದ ವರ್ಷದ ಅಕ್ಟೋಬರ್ 3ರಂದು ನಡೆದಿದ್ದ ಲಖಿಂಪುರ ಖೇರಿ ಹಿಂಸಾಚಾರ ಘಟನೆಯಲ್ಲಿ ಪ್ರತಿಭಟನನಿರತ ನಾಲ್ವರು ರೈತರು ಸೇರಿದಂತೆ 8 ಮಂದಿ ಬಲಿಯಾಗಿದ್ದರು. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರು ಪ್ರಮುಖ ಆರೋಪಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.