ADVERTISEMENT

ದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಹಿಂಸಾಚಾರವನ್ನು ಮೋದಿ ಖಂಡಿಸಲಿ: ಗೆಹಲೋತ್‌

ಪಿಟಿಐ
Published 20 ಏಪ್ರಿಲ್ 2022, 13:39 IST
Last Updated 20 ಏಪ್ರಿಲ್ 2022, 13:39 IST
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ | ಪಿಟಿಐ ಚಿತ್ರ
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ | ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರದಲ್ಲಿ ಸಂಭವಿಸುತ್ತಿರುವ ಧಾರ್ಮಿಕ ಹಿಂಸಾಚಾರ ಕೃತ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಬೇಕು. ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾತನಾಡಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಗೆಹಲೋತ್‌, 'ಪ್ರಧಾನಿಯ ಮೌನ ದುಷ್ಕರ್ಮಿಗಳನ್ನು ಬೆಂಬಲಿಸಿದಂತಾಗುತ್ತದೆ. ಅಧಿಕಾರದಲ್ಲಿರುವವರು ಹಿಂಸಾಕೃತ್ಯಗಳು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಇಂತಹ ಕೃತ್ಯಗಳನ್ನು ಸಾರ್ವಜನಿಕವಾಗಿ ಖಂಡಿಸಬೇಕು. ಆದರೆ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

'ಪ್ರಧಾನಿ ಅಥವಾ ಗೃಹ ಸಚಿವರು ರಾಷ್ಟ್ರದ ಹಿತಾಸಕ್ತಿಯ ನಿರ್ಣಯಗಳನ್ನು ಕೈಗೊಳ್ಳಬೇಕು. ನನ್ನ ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸಬೇಕು. ಅವರು ತಮ್ಮ ಆತ್ಮಶೋಧನೆ ಮಾಡಿಕೊಳ್ಳಬೇಕು. ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಬೇಕು. ಸಮಾಜಘಾತುಕ ಶಕ್ತಿಗಳು ನಡೆಸುತ್ತಿರುವ ಹಿಂಸಾಚಾರವನ್ನು ಸ್ವೀಕರಿಸುವುದಿಲ್ಲ ಎಂದು ಜನರಿಗೆ ಹೇಳಬೇಕು. ಎಲ್ಲ ರೀತಿಯ ಹಿಂಸೆಯನ್ನು ಪ್ರಧಾನಿ ಸಾರ್ವಜನಿಕವಾಗಿ ಖಂಡಿಸಬೇಕು' ಎಂದು ಗೆಹಲೋತ್‌ ಒತ್ತಿ ಹೇಳಿದ್ದಾರೆ.

ADVERTISEMENT

'ಪ್ರಧಾನಿ ಮತ್ತು ಗೃಹ ಸಚಿವರ ಕಚೇರಿಯ ಮಹತ್ವದ ಬಗ್ಗೆ ನನಗೆ ಅರಿವಿದೆ. ಆದರೆ ಇವತ್ತು ಏನಾಗುತ್ತಿದೆ? ಸ್ವತಃ ಗೃಹ ಸಚಿವರೇ ಸರ್ಕಾರಗಳನ್ನು ಬೀಳಿಸಲು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವವೇ?' ಎಂದು ಗೆಹಲೋತ್‌ ಖಾರವಾಗಿ ಪ್ರಶ್ನಿಸಿದ್ದಾರೆ.

ರಾಜಸ್ಥಾನದ ಕರೌಲಿ ಸೇರಿದಂತೆ ರಾಷ್ಟ್ರದ ವಿವಿಧೆಡೆಗಳಲ್ಲಿ ಉದ್ಭವಿಸಿರುವ ಧಾರ್ಮಿಕ ದೊಂಬಿಗಳ ಬಗ್ಗೆ ಹಾಗೂ ದ್ವೇಷಪೂರಿತ ಭಾಷಣಗಳ ಬಗ್ಗೆ ಗೆಹಲೋತ್‌ ಪ್ರತಿಕ್ರಿಯಿಸಿದ್ದಾರೆ.

'ಅವರು ತುಂಬ ಅಹಂಕಾರಿಗಳಾಗಿದ್ದಾರೆ. ಅವರು ಮಾಡಿದ್ದೇ ಸರಿ ಎಂದು ಯೋಚಿಸುತ್ತಿದ್ದಾರೆ. ಅವರು ಹೇಳಿದ್ದೇ ಕೊನೆಯ ಪದವಾಗಿದೆ, ಜನರು ಏನು ಹೇಳುತ್ತಾರೆ ಎಂಬುದನ್ನು ಕಡೆಗಣಿಸುತ್ತಿದ್ದಾರೆ. ಹಾಗಾಗಿ ರಾಷ್ಟ್ರದಲ್ಲಿ ಈ 'ತಮಾಷಾ' (ಗಲಭೆ ಎಬ್ಬಿಸುವ ದೃಶ್ಯಗಳು) ನಡೆಯುತ್ತಿದೆ. ಆದರೆ ಅವರು ಜನರ ಬಗ್ಗೆ ಚಿಂತಿಸದಿದ್ದರೆ, ಮುಂದೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಜನ ಎಂದಿಗೂ ಮರೆಯುವುದಿಲ್ಲ' ಎಂದು ಗೆಹಲೋತ್‌ ಮೋದಿ ಮತ್ತು ಶಾರನ್ನು ಉದ್ದೇಶಿಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.