ನವದೆಹಲಿ:ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 'ಒಬ್ಬ ವ್ಯಕ್ತಿಗೆ ಒಂದು ಹುದ್ದೆ' ನಿಯಮವನ್ನು ಪಾಲಿಸಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ, ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಇಂದು (ಸೆ.25 ಭಾನುವಾರ) ಸಂಜೆ ಕರೆದಿದೆ.
ಸಭೆಯು ಗೆಹಲೋತ್ ಅವರ ನಿವಾಸದಲ್ಲಿ ಸಂಜೆ ನಡೆಯಲಿದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಅಜಯ್ ಮಾಕೇನ್ ಅವರನ್ನು ವೀಕ್ಷಕರಾಗಿಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದೆ.
ರಾಜಸ್ಥಾನದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆಯೇ ಅಥವಾ ಆ ಅಧಿಕಾರವನ್ನು ಸಿಎಲ್‌ಪಿ ಅಧ್ಯಕ್ಷರಿಗೆ ನೀಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಗೆಹಲೋತ್ ಒಪ್ಪಿರುವ ಹಿನ್ನೆಲೆಯಲ್ಲಿಸೆಪ್ಟೆಂಬರ್ 20ರಂದೂ ಸಿಎಲ್‌ಪಿ ಸಭೆ ನಡೆದಿತ್ತು.
ರಾಜ್ಯದಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿರುವ ಸಚಿನ್ ಪೈಲಟ್ ಬದಲು ಬೆಂಬಲಿಗರೊಬ್ಬರನ್ನು ಸಿಎಂ ಮಾಡುವ ಲೆಕ್ಕಾಚಾರದಲ್ಲಿ ಗೆಹಲೋತ್ ಇದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಯುವ ನಾಯಕ ಪೈಲಟ್ ಅವರತ್ತ ಒಲವು ತೋರುತ್ತಿದೆ.ಪೈಲಟ್‌ಗೆ ಪಕ್ಷದ ನಾಯಕರ ಬೆಂಬಲವಿದೆ ಎಂದು ರಾಹುಲ್ ಗಾಂಧಿ ಗೆಹಲೋತ್ ಅವರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದರೂ,ರಾಜ್ಯದಲ್ಲಿ ವರ್ಚಸ್ಸು ಕುಂದಿದೆ ಎಂಬ ಗ್ರಹಿಕೆ ಮೂಡುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿ ಸ್ಥಾನವನ್ನು ಪೈಲಟ್‌ಗೆ ಬಿಟ್ಟುಕೊಡುವುದುಗೆಹಲೋತ್ ಪಾಲಿಗೆ ನುಂಗಲಾರದ ತುತ್ತಾಗಿದೆ.
ಪೈಲಟ್ ಬದಲಾಗಿಹಿರಿಯ ನಾಯಕ ಹಾಗೂ ರಾಜಸ್ಥಾನ ಸ್ಪೀಕರ್ ಸಿ.ಪಿ.ಜೋಶಿ ಅಥವಾ ತಮ್ಮ ನಿಷ್ಠಾವಂತರಾಗಿರುವ ಬಿ.ಡಿ. ಕಲ್ಲಾ, ಶಾಂತಿ ಕುಮಾರ್ ಧರಿವಾಲ್ ಅವರನ್ನು ಗೆಹಲೋತ್ ಬೆಂಬಲಿಸುವ ಸಾಧ್ಯತೆ ಇದೆ.
ಜೋಶಿ ಅವರು ರಾಹುಲ್ ಗಾಂಧಿಗೆನಿಕಟವರ್ತಿಯಾಗಿದ್ದರು ಮತ್ತು ರಾಜಕೀಯದ ಆರಂಭದ ದಿನಗಳಲ್ಲಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು ಎಂಬುದು ಗಮನಿಸಬೇಕಾದ ವಿಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.