ಭೋಪಾಲ್: ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಕಂಡುಕೊಂಡಿರುವ ಅಂಶಗಳು ಅಲ್ಲಿ ದೇವಾಲಯ ಇತ್ತೆಂಬುದನ್ನು ಪುಷ್ಟೀಕರಿಸಿವೆ. ಆ ಪ್ರದೇಶದ ವಝುಖಾನಾದಲ್ಲಿ ಪತ್ತೆಯಾಗಿರುವ ಲಿಂಗಕ್ಕೆ ಸೇವಾ ಪೂಜೆ ನೆರವೇರಿಸಲು ಅನುಮತಿ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶನಿವಾರ ಆಗ್ರಹಿಸಿದೆ.
ಮಸೀದಿಯ ಆಡಳಿತ ನಿರ್ವಹಿಸುತ್ತಿರುವ ಇಂತೆಜಾಮಿಯಾ ಸಮಿತಿಯು ಮಸೀದಿಯನ್ನು ಗೌರವಯುತವಾಗಿ ಬೇರೆಡೆಗೆ ಸ್ಥಳಾಂತರಲು ಒಪ್ಪಿಗೆ ನೀಡಬೇಕು. ಜ್ಞಾನವ್ಯಾಪಿ ಮಸೀದಿ ಇರುವ ಸ್ಥಳವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಜಗತ್ತೇ ಒಪ್ಪಿಕೊಳ್ಳಲಿದೆ: ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯಲ್ಲಿ ಎಎಸ್‌ಐ ಕಂಡುಕೊಂಡಿರುವ ಅಂಶಗಳನ್ನು ಇಡೀ ಜಗತ್ತೇ ಒಪ್ಪಿಕೊಳ್ಳಲಿದೆ ಎಂದು ಮಧ್ಯಪ್ರದೇಶ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.
ದೇವಾಲಯವನ್ನು ಧ್ವಂಸ ಮಾಡಿ, ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿರುವುದನ್ನು ಉಲ್ಲೇಖಿಸಿ ಪಟೇಲ್ ಅವರು ಈ ಹೇಳಿಕೆ ನೀಡಿದ್ದಾರೆ.
ಜಬಲ್‌ಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನ್ಯಾಯಾಲಯಕ್ಕೆ ಎಎಸ್‌ಐ ಸಲ್ಲಿಸಿರುವ ವರದಿಯು ಎಲ್ಲರ ಜ್ಞಾನವನ್ನು ಹೆಚ್ಚಿಸುವಂತಿದೆ ಎಂದಿದ್ದಾರೆ.
ಎಎಸ್‌ಐನ ನಿವೃತ್ತ ಅಧಿಕಾರಿಗಳು ಪುರಾತತ್ವ ಸಂಶೋಧನೆಗಾಗಿ ವಿದೇಶಗಳಿಗೆ ತೆರಳುತ್ತಾರೆ ಮತ್ತು ಪ್ರಪಂಚದ ಪುರಾತತ್ವಶಾಸ್ತ್ರಕ್ಕೆ ಎಎಸ್‌ಐ ಮಹತ್ವದ ಕೊಡುಗೆ ನೀಡಿದೆ ಎಂದೂ ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.