ADVERTISEMENT

ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 2:53 IST
Last Updated 28 ಮೇ 2020, 2:53 IST
ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದ ಮೈ ಸನ್‌ನಲ್ಲಿರುವ ಚಾಮ್‌ ದೇಗುಲಗಳ ಸಂಕೀರ್ಣದಲ್ಲಿ ಪತ್ತೆಯಾಗಿರುವ 9ನೇ ಶತಮಾನದ ಶಿವಲಿಂಗ
ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದ ಮೈ ಸನ್‌ನಲ್ಲಿರುವ ಚಾಮ್‌ ದೇಗುಲಗಳ ಸಂಕೀರ್ಣದಲ್ಲಿ ಪತ್ತೆಯಾಗಿರುವ 9ನೇ ಶತಮಾನದ ಶಿವಲಿಂಗ    

ನವದೆಹಲಿ: ವಿಯೆಟ್ನಾಂನ ಕ್ವಾಂಗ್‌ ನಾಮ್‌ ಪ್ರಾಂತ್ಯದ ಮೈ ಸನ್‌ನಲ್ಲಿ ಚಾಮ್‌ ದೇಗುಲಗಳ ಪುನಾರಾಚನೆ ಕಾರ್ಯದಲ್ಲಿ ತೊಡಗಿರುವ ಭಾರತೀಯ ಪುರಾತತ್ವ ಇಲಾಖೆಯ ತಂಡಕ್ಕೆ ಇತ್ತೀಚೆಗೆ ಬೃಹತ್‌ ಗಾತ್ರದ ಶಿವಲಿಂಗವೊಂದು ಸಿಕ್ಕಿದೆ.

ಈ ವಿಚಾರವನ್ನು ಭಾರತೀಯ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರು ಬುಧವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ ವಿಯೆಟ್ನಾಂ‌ನ ಮೈ ಸನ್‌ನಲ್ಲಿ ಚಾಮ್‌ ದೇಗುಲಗಳ ಪುನಾರಚನೆಯಲ್ಲಿ ತೊಡಗಿರುವ ಭಾರತೀಯ ಪುರಾತತ್ವ ಇಲಾಖೆಯ ತಂಡಕ್ಕೆ ಶಿವಲಿಂಗವೊಂದು ಸಿಕ್ಕಿದೆ. ಇದು ಎರಡೂ ದೇಶಗಳ ನಡುವಿನ ನಾಗರಿಕತೆ ನಂಟನ್ನು ಪುನರುಚ್ಚರಿಸುತ್ತಿದೆ. ಭಾರತದ ಅಭಿವೃದ್ಧಿ ಸಹಭಾಗಿತ್ವಕ್ಕೆ ಇದು ಉತ್ತಮ ಸಾಂಸ್ಕೃತಿಕ ಉದಾಹರಣೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದಲ್ಲಿರುವ, ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಚಾಮ್ ದೇವಾಲಯ ಸಂಕೀರ್ಣವನ್ನು ಕ್ರಿ.ಶ 9 ನೇ ಶತಮಾನದಲ್ಲಿ ಎರಡನೇ ರಾಜ ಇಂದ್ರವರ್ಮ ನಿರ್ಮಿಸಿದ್ದ ಎನ್ನಲಾಗಿದೆ. ಅದೇ ಪ್ರದೇಶದಲ್ಲಿ ಪ್ರಸಿದ್ಧ ಡಾಂಗ್ ಡುವಾಂಗ್ ಬೌದ್ಧ ಕೇಂದ್ರ ನಿರ್ಮಾಣಕ್ಕೂ ಆತ ಕಾರಣನಾಗಿದ್ದ ಎಂದು ಹೇಳಲಾಗಿದೆ.

ADVERTISEMENT

ಭಾರತೀಯ ಪುರಾತತ್ವ ಇಲಾಖೆಯ ನಾಲ್ಕು ಸದಸ್ಯರ ತಂಡವು ದೇಗುಲಗಳನ್ನು ಪುನಾರಚಣೆ ಮಾಡುವ ನಾಲ್ಕನೇ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಈ ವರ್ಷದ ಕಾರ್ಯಾಚರಣೆ ವೇಳಾಪಟ್ಟಿ ಜನವರಿಯಿಂದ ಜೂನ್‌ವರೆಗೆ ನಡೆಯಲಿದೆ.

ಕಳೆದ ಮೂರು ಕಾರ್ಯಾಚರಣೆಯಲ್ಲಿ ತಂಡವು, ಎರಡು ವಿಭಿನ್ನ ದೇಗುಲ ಸಂಕೀರ್ಣವನ್ನು ಪುನಾರಚನೆ ಮಾಡಿದೆ. ತಂಡ ಈಗ ಮೂರನೇ ಸಂಕೀರ್ಣದ ದೇವಾಲಯಗಳಲ್ಲಿ ಕೆಲಸ ಮಾಡುತ್ತಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ಭಾರತದ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ, ಹಿಂದೂ ಧರ್ಮದ ಆರಾಧನೆಯಲ್ಲಿ ತೊಡಗಿದ್ದ ಚಂಪಾ ನಾಗರಿಕತೆ ಅಥವಾ ಚಾಮ್‌ ನಾಗರಿಕತೆಯು ಮಧ್ಯ ವಿಯೆಟ್ನಾಂನಲ್ಲಿ 9ನೇ ಶತಮಾನಕ್ಕೂ ಹಿಂದೆ ಉತ್ತುಂಗದಲ್ಲಿತ್ತು. ಇಂದ್ರಪುರ ಎಂಬುದು ಅದರ ರಾಜಧಾನಿಯಾಗಿತ್ತು ಎನ್ನಲಾಗಿದೆ. ಚಾಮ್‌ ನಾಗರಿಕತೆ ಕಾಲದಲ್ಲೇ ವಿಯೆಟ್ನಾಂನ ಮೈ ಸನ್‌ ಪ್ರದೇಶದಲ್ಲಿ ಚಾಮ್‌ ದೇಗುಲ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.