ADVERTISEMENT

ಎಸ್‌ಐಗೆ ಸಚಿವರನ್ನು ಕೊಲ್ಲುವ ಸ್ಪಷ್ಟ ಉದ್ದೇಶವಿತ್ತು: ಒಡಿಶಾ ಪೊಲೀಸರು

ಸಿಬಿಐ ತನಿಖೆಗೆ ಆಗ್ರಹ

ಪಿಟಿಐ
Published 31 ಜನವರಿ 2023, 11:11 IST
Last Updated 31 ಜನವರಿ 2023, 11:11 IST
ಗೋಪಾಲ್ ದಾಸ್
ಗೋಪಾಲ್ ದಾಸ್   

ಭುವನೇಶ್ವರ: ‘ಆರೋಪಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗೋಪಾಲ್ ದಾಸ್‌ಗೆ ಆರೋಗ್ಯ ಸಚಿವ ನಬ ಕಿಶೋರ್ ದಾಸ್ ಅವರನ್ನು ಕೊಲ್ಲುವ ಸ್ಪಷ್ಟವಾದ ಉದ್ದೇಶವಿತ್ತು’ ಎಂದು ಸಚಿವರ ಹತ್ಯೆಗೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್ಐಆರ್‌ನಲ್ಲಿ ಒಡಿಶಾ ಪೊಲೀಸರು ಹೇಳಿದ್ದಾರೆ.

ಸಚಿವರ ಮೇಲೆ ಎಎಸ್‌ಐ ಗುಂಡು ಹಾರಿಸಿದ ಸ್ಥಳದಲ್ಲಿದ್ದ ಬ್ರಜರಾಜನಗರ ಪೊಲೀಸ್ ಠಾಣೆಯ ಪ್ರಭಾರಿ ಇನ್‌ಸ್ಪೆಕ್ಟರ್ (ಐಐಸಿ) ಪ್ರದ್ಯುಮ್ನ ಕುಮಾರ್ ಸ್ವೈನ್ ಅವರು ಈ ಸಂಬಂಧ ಹೇಳಿಕೆ ನೀಡಿದ್ದಾರೆ.

‘ಜ. 29ರಂದು ಮಧ್ಯಾಹ್ನ 12.15ಕ್ಕೆ ಸಚಿವರ ಕಾರು ಕಟ್ಟಡವೊಂದರ ಬಳಿ ನಿಂತಿತು. ಕಾರಿನ ಮುಂಭಾಗದ ಬಾಗಿಲು ತೆರೆದ ಬಳಿಕ ಸಚಿವರು ಕಾರಿನಿಂದ ಕೆಳಗಿಳಿದರು. ಕಾರ್ಯಕ್ರಮ ನಿಮಿತ್ತ ಸಂಚಾರ ತೆರವು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗಾಂಧಿ ಚೌಕ್ ಪೊಲೀಸ್ ಔಟ್‌ಪೋಸ್ಟ್‌ನ ಎಎಸ್‌ಐ ಗೋಪಾಲ್ ದಾಸ್ ಅವರು, ಇದ್ದಕ್ಕಿದ್ದಂತೆಯೇ ಸಚಿವರ ಸಮೀಪಕ್ಕೆ ಬಂದು ತಮ್ಮ ಸರ್ವೀಸ್ ಪಿಸ್ತೂಲಿನಿಂದ ಅವರತ್ತ ಗುರಿಯಿಟ್ಟು ಅತ್ಯಂತ ಸಮೀಪದಿಂದ ಗುಂಡು ಹಾರಿಸಿದರು. ಎಎಸ್‌ಐಗೆ ಸಚಿವರನ್ನು ಕೊಲ್ಲುವ ಉದ್ದೇಶ ಸ್ಪಷ್ಟವಾಗಿತ್ತು’ ಎಂದು ಬ್ರಜರಾಜನಗರ ಪೊಲೋಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರದ್ಯುಮ್ನ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ಸಚಿವರ ಎದೆಗೆ ಗುಂಡು ತಾಗುತ್ತಿದ್ದಂತೆಯೇ ಅವರು ನೆಲಕ್ಕೆ ಕುಸಿದುಬಿದ್ದರು. ಅವರ ದೇಹದಿಂದ ರಕ್ತ ಸುರಿಯಲಾರಂಭಿಸಿತು. ಅದೇ ವೇಳೆ ಆರೋಪಿಯು ಹಾರಿಸಿದ ಎರಡನೇ ಸುತ್ತಿನ ಗುಂಡು ನನ್ನ ಉಂಗುರದ ಬೆರಳಿಗೆ ತಾಗಿತು. ಸ್ಥಳದಲ್ಲಿದ್ದ ಕಾನ್‌ಸ್ಟೆಬಲ್ ಕೆ.ಸಿ. ಪ್ರಧಾನ ಅವರ ಜತೆಗೂಡಿ ಆರೋಪಿಯನ್ನು ಹಿಡಿದೆವು’ ಎಂದು ಅವರು ವಿವರಿಸಿದ್ದಾರೆ.

ಆರೋಪಿಗೆ ಬೈಪೋಲಾರ್ ಡಿಸಾರ್ಡರ್: ಮನೋವೈದ್ಯರ ಹೇಳಿಕೆ
ಭುವನೇಶ್ವರ:
‘ ಆರೋಪಿ ಎಎಸ್‌ಐ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದಾರೆ. ಇದು ತೀವ್ರತರನಾದ ಮಾನಸಿಕ ಕಾಯಿಲೆಯಾಗಿದ್ದು, ಉನ್ಮಾದದ ಸ್ಥಿತಿಯ ಕಾರಣ ಕೆಲವೊಮ್ಮೆ ವ್ಯಕ್ತಿಯ ಮನಃಸ್ಥಿತಿಯಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ’ ಎಂದು ಪೊಲೀಸ್ ಅಧಿಕಾರಿಗೆ ಒಂದು ದಶಕದಿಂದ ಚಿಕಿತ್ಸೆ ನೀಡುತ್ತಿರುವ ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ತ್ರಿಪಾಠಿ ಹೇಳಿದ್ದಾರೆ.

‘ಎಂಟ್ಹತ್ತು ವರ್ಷಗಳ ಹಿಂದೆ ದಾಸ್ ಅವರು ಮೊದಲ ಬಾರಿಗೆ ನನ್ನ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಅವರಿಗೆ ತುಂಬಾ ಸುಲಭವಾಗಿ ಕೋಪ ಬರುತ್ತಿತ್ತು. ಇದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದ ಬಗ್ಗೆ ನನಗೆ ಖಚಿತವಿಲ್ಲ. ಒಂದು ವೇಳೆ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳದಿದ್ದರೆ, ರೋಗ ಮರುಕಳಿಸುತ್ತದೆ. ಅವರು ನನ್ನನ್ನು ಕೊನೆಯದಾಗಿ ಒಂದು ವರ್ಷದ ಹಿಂದೆ ಭೇಟಿ ಮಾಡಿದ್ದರು’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಹತ್ಯೆ ಹಿಂದೆ ಪಿತೂರಿಯ ಶಂಕೆ: ಸಿಬಿಐ ತನಿಖೆಗೆ ಆಗ್ರಹ
ಭುವನೇಶ್ವರ:
ಆರೋಗ್ಯ ಸಚಿವರ ಹತ್ಯೆಯ ಹಿಂದೆ ಪಿತೂರಿಯ ಶಂಕೆ ವ್ಯಕ್ತಪಡಿಸಿರುವ ವಿರೋಧಪಕ್ಷಗಳು, ಸಿಬಿಐ ತನಿಖೆಗೆ ಆಗ್ರಹಿಸಿವೆ.

‘ಇದು ಆಳವಾದ ಪಿತೂರಿಯ ಭಾಗವಾಗಿದೆ. ಈ ಕುರಿತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ. ಘಟನಾ ಸ್ಥಳದಲ್ಲಿ ಸಾಕಷ್ಟು ಪೊಲೀಸರನ್ನು ಏಕೆ ನಿಯೋಜಿಸಿರಲಿಲ್ಲ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ’ ಎಂದು ವಕೀಲರೂ ಆಗಿರುವ ಕಾಂಗ್ರೆಸ್ ಶಾಸಕಾಂಘ ಪಕ್ಷದ ನಾಯಕ ನರಸಿಂಗ್ ಅವರು ಹೇಳಿದ್ದಾರೆ.

‘ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡುವ ಒಂದು ದಿನ ಮುನ್ನ ಆರೋಪಿ ಎಎಸ್‌ಐಗೆ ಪಿಸ್ತೂಲ್ ನೀಡಲಾಗಿದೆ. ಹಾಗಾಗಿ, ಹತ್ಯೆಗಾಗಿ ಪಿತೂರಿ ನಡೆದಿರುವ ಶಂಕೆ ಇದೆ. ಈ ಕುರಿತು ಸಿಬಿಐ ತನಿಖೆ ನಡೆಯಬೇಕು’ ಎಂದು ಬಿಜೆಪಿಯ ವಿರೋಧಪಕ್ಷದ ನಾಯಕ ಜಯನಾರಾಯಣ ಮಿಶ್ರಾ ಆಗ್ರಹಿಸಿದ್ದಾರೆ.

ಸಚಿವರ ಹತ್ಯೆಯ ಪ್ರಕರಣ ಕುರಿತಂತೆ ಸಂಸತ್ತಿನಲ್ಲಿ ಪ್ರಸ್ತಾಪಿಸುವೆ ಎಂದು ಕಾಳಹಂದಿ ಕ್ಷೇತ್ರದ ಬಿಜೆಪಿ ಸಂಸದ ಬಸಂತ್ ಪಾಂಡಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.