ಇಂದೋರ್: ವಿವಾದಿತ ಭೋಜಶಾಲಾ-ಕಮಲ-ಮೌಲಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸೋಮವಾರ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠಕ್ಕೆ ಸಲ್ಲಿಸಿದೆ.
ಎಎಸ್‌ಐ ಪರ ವಕೀಲ ಹಿಮಾಂಶು ಜೋಶಿ ಅವರು 2 ಸಾವಿರ ಪುಟಗಳ ವರದಿಯನ್ನು ಹೈಕೋರ್ಟ್‌ನ ರಿಜಿಸ್ಟರಿಗೆ ಹಸ್ತಾಂತರಿಸಿದರು. ನಾನು ವರದಿಯನ್ನು ಸಲ್ಲಿಸಿದ್ದೇನೆ. ಜುಲೈ 22 ರಂದು ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
11ನೇ ಶತಮಾನದ ವಿವಾದಿತ ಸ್ಮಾರಕದ ಆವರಣದಲ್ಲಿ ಸುಮಾರು 3 ತಿಂಗಳು ನಡೆಸಿದ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಜುಲೈ 15ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಜುಲೈ 4ರಂದು ಎಎಸ್‌ಐಗೆ ಆದೇಶ ನೀಡಿತ್ತು.
ಭೋಜಶಾಲಾ ಸಂಕೀರ್ಣವು ಮಧ್ಯಯುಗದ ಒಂದು ಸ್ಮಾರಕ. ಇಲ್ಲಿರುವುದು ವಾಗ್ದೇವಿ (ಸರಸ್ವತಿ) ದೇವಾಲಯವೆಂದು ಹಿಂದೂಗಳು ಭಾವಿಸಿದ್ದರೆ, ಮುಸ್ಲಿಂ ಸಮುದಾಯವು ಇದು ಕಮಲ ಮೌಲಾ ಮಸೀದಿ ಎಂದು ನಂಬಿದೆ.
ಹಿಂದೂ ಫ್ರಂಟ್ ಫಾರ್ ಜಸ್ಟೀಸ್ (ಎಚ್‌ಎಫ್‌ಜೆ) ಸಂಘಟನೆಯು ಭೋಜಶಾಲಾ–ಕಮಲ ಮೌಲಾ ಮಸೀದಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಅದರಂತೆ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸಲು ಮಾರ್ಚ್ 11ರಂದು ಮಧ್ಯಪ್ರದೇಶ ಹೈಕೋರ್ಟ್ ಎಎಸ್‌ಐಗೆ ನಿರ್ದೇಶನ ನೀಡಿತ್ತು. ಸಮೀಕ್ಷೆ ಆರಂಭಿಸಿದ ಎಎಸ್‌ಐ ವರದಿ ಸಲ್ಲಿಕೆಗೆ ಹೆಚ್ಚಿನ ಕಾಲಾವಕಾಶ ಕೋರಿತ್ತು.
ವಿವಾದ ಭುಗಿಲೆದ್ದ ನಂತರ ಸ್ಮಾರಕ ಪ್ರವೇಶಕ್ಕೆ ಸಂಬಂಧಿಸಿದಂತೆ ಎಎಸ್‌ಐ 2003ರ ಏಪ್ರಿಲ್ 7ರಂದು ಆದೇಶವನ್ನು ನೀಡಿತ್ತು . ಕಳೆದ 21 ವರ್ಷಗಳಿಂದ ಜಾರಿಯಲ್ಲಿರುವ ಆದೇಶದ ಪ್ರಕಾರ, ಮಂಗಳವಾರದಂದು ಹಿಂದೂಗಳಿಗೆ ಭೋಜಶಾಲೆಯಲ್ಲಿ ಪೂಜೆ ಸಲ್ಲಿಸಲು ಅವಕಾಶವಿದ್ದರೆ, ಶುಕ್ರವಾರದಂದು ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.