ADVERTISEMENT

ಏಷ್ಯಾದ ಮೊದಲ ಮಹಿಳಾ ಲೋಕೊಪೈಲಟ್ ಸುರೇಖಾರಿಂದ ‘ವಂದೇ ಭಾರತ್’ ಚಾಲನೆ

ಪಿಟಿಐ
Published 14 ಮಾರ್ಚ್ 2023, 13:21 IST
Last Updated 14 ಮಾರ್ಚ್ 2023, 13:21 IST
ಸುರೇಖಾ ಯಾದವ್ –ಪಿಟಿಐ ಚಿತ್ರ 
ಸುರೇಖಾ ಯಾದವ್ –ಪಿಟಿಐ ಚಿತ್ರ    

ಮುಂಬೈ: ‘ಏಷ್ಯಾದ ಮೊದಲ ಮಹಿಳಾ ಲೋಕೊಪೈಲಟ್ ಸುರೇಖಾ ಯಾದವ್ ಅವರು, ಹೊಸದಾಗಿ ಪರಿಚಯಿಸಿರುವ ಸೆಮಿ ಹೈಸ್ಪೀಡ್ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ ರೈಲನ್ನು ಚಾಲನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ’ ಎಂದು ಕೇಂದ್ರ ರೈಲ್ವೆಯು ತಿಳಿಸಿದೆ.

ಸುರೇಖಾ ಅವರು ಸೋಮವಾರ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ನಡುವಿನ ಸೆಮಿ ಹೈಸ್ಪೀಡ್ ರೈಲನ್ನು ಯಶಸ್ವಿಯಾಗಿ ಚಾಲನೆ ಮಾಡಿದರು.

‘ಮಾರ್ಚ್ 13ರಂದು ನಿಗದಿತ ಸಮಯದಂದು ರೈಲು ಸೊಲ್ಲಾಪುರ ಸ್ಟೇಷನ್‌ನಿಂದ ಹೊರಟು ಸಿಎಸ್‌ಎಂಟಿಗೆ ನಿಗದಿತ ಸಮಯಕ್ಕೂ ಐದು ನಿಮಿಷಗಳ ಮೊದಲೇ ತಲುಪಿತು. 450 ಕಿ.ಮೀ. ದೂರವನ್ನು ಯಶಸ್ವಿಯಾಗಿ ಕ್ರಮಿಸಿದ ಸುರೇಖಾ ಯಾದವ್ ಅವರನ್ನು ಸಿಎಸ್ಎಂಟಿಯ ಫ್ಲಾಟ್‌ಫಾರಂ 8ರಲ್ಲಿ ಸನ್ಮಾನಿಸಲಾಯಿತು’ ಎಂದು ಕೇಂದ್ರ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ವಂದೇ ಭಾರತ್– ನಾರಿ ಶಕ್ತಿಯಿಂದ ನಡೆಯುತ್ತಿದೆ. ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೊ ಪೈಲಟ್ ಶ್ರೀಮತಿ ಸುರೇಖಾ ಯಾದವ್’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

‘ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೊ ಪೈಲಟ್ ಆಗುವ ಮೂಲಕ ಸುರೇಖಾ ಯಾದವ್ ಅವರು ಕೇಂದ್ರ ರೈಲ್ವೆಯ ಕಿರೀಟದಲ್ಲಿ ಮತ್ತೊಂದು ಗರಿಯನ್ನು ಮೂಡಿಸಿದ್ದಾರೆ’ ಎಂದು ಕೇಂದ್ರ ರೈಲ್ವೆ ಹೇಳಿದೆ.

ಮಹಾರಾಷ್ಟ್ರದ ಸತಾರಾದವರಾದ ಸುರೇಖಾ ಯಾದವ್ ಅವರು 1988ರಲ್ಲಿ ಭಾರತದ ಮೊದಲ ರೈಲು ಚಾಲಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಸಾಧನೆಗಾಗಿ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕೇಂದ್ರ ರೈಲ್ವೆಯು ಸಿಎಸ್‌ಎಂಟಿ-ಸೋಲಾಪುರ ಮತ್ತು ಸಿಎಸ್‌ಎಂಟಿ-ಸಾಯಿನಗರ ಶಿರಡಿ ಮಾರ್ಗಗಳಲ್ಲಿ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ಎರಡು ರೈಲುಗಳ ಸಂಚಾರವನ್ನು ಆರಂಭಿಸಿದೆ. ಫೆಬ್ರವರಿ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾರ್ಗಗಳ ರೈಲು ಸಂಚಾರವನ್ನು ಉದ್ಘಾಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.