ಮುಂಬೈ: ಮಹಾ ವಿಕಾಸ್ ಅಘಾಡಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನಾದ ಯಾವುದೇ ಶಾಸಕನಿಗೂ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
‘ಚುನಾವಣೆಯಲ್ಲಿ ಮತ ಪಡೆಯಲು ಇಚ್ಛಿಸಿದರೆ ಈ ಶಾಸಕರು ತಮ್ಮ ತಂದೆಯ ಹೆಸರನ್ನು ಹೇಳಿಕೊಂಡು ಹೋಗಲಿ. ಶಿವಸೇನಾದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು’ ಎಂದು ಮುಂಬೈನ ಶಿವಸೇನಾ ಭವನದಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉದ್ಧವ್ ಠಾಕ್ರೆ ಹೇಳಿರುವುದಾಗಿ ಪ್ರಧಾನ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಸಭೆಯಲ್ಲಿ ಬಂಡಾಯ ಶಾಸಕರ ವಿರುದ್ಧ ಕ್ರಮಕ್ಕೆ ಉದ್ಧವ್ ಠಾಕ್ರೆಗೆ ಅಧಿಕಾರ ಸೇರಿದಂತೆ ಕೆಲವು ಪ್ರಮುಖ ನಿರ್ಣಯಗಳನ್ನು ಅವಿರೋಧವಾಗಿ ಕೈಗೊಳ್ಳಲಾಗಿದೆ.
ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪಕ್ಷ ಬಿಟ್ಟವರು ನಮ್ಮ ಪೂರ್ವಜರ ಹೆಸರು ಬಳಸುವಂತಿಲ್ಲ. ಬಂಡಾಯ ಶಾಸಕರ ವಿರುದ್ಧ ಯಾವ ಕ್ರಮ ಆಗಲಿದೆ ಎಂಬುದನ್ನು ಜನ ಸಂಜೆ ವೇಳೆಗೆ ನೋಡಲಿದ್ದಾರೆ ಎಂದು ರಾವುತ್ ಹೇಳಿದ್ದಾರೆ.
ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತ ಅನುಸರಣೆ, ಮಹಾರಾಷ್ಟ್ರದ ಏಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಸೇರಿದಂತೆ 6 ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.