ಗುವಾಹಟಿ: ಅಸ್ಸಾಂನ ಪಾಕಪದ್ಧತಿಯ ಅವಿಭಾಜ್ಯ ಭಾಗವಾಗಿರುವ ‘ಕಾಜಿ ನೀಮು’(ಸಿಟ್ರಸ್ ಲೆಮನ್) ಹಣ್ಣನ್ನು ‘ರಾಜ್ಯ ಹಣ್ಣು’ ಎಂದು ಅಸ್ಸಾಂ ಸರ್ಕಾರ ಮಂಗಳವಾರ ಘೋಷಿಸಿದೆ.
ನಿಂಬೆ ಜಾತಿಗೆ ಸೇರಿದ ‘ಕಾಜಿ ನೀಮು’ ಅಸ್ಸಾಂನಲ್ಲಿ ಸಿಗುವ ಒಂದು ವಿಶೇಷ ಫಲವಾಗಿದೆ. ತನ್ನ ವಿಶಿಷ್ಟ ಸ್ವಾದ ಮತ್ತು ಔಷಧಿಯ ಗುಣಗಳಿಂದ ರಾಜ್ಯದಾದ್ಯಂತ ಹೆಚ್ಚು ಬಳಕೆಯಲ್ಲಿದೆ. 2016ರಲ್ಲಿ ಭೌಗೋಳಿಕ ಗುರುತಿನ ಸ್ಥಾನಮಾನವನ್ನು(ಜಿಐ ಟ್ಯಾಗ್) ಈ ಹಣ್ಣಿಗೆ ನೀಡಲಾಗಿತ್ತು.
‘ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಅಸ್ಸಾಂನ ರಾಜ್ಯ ಹಣ್ಣಾಗಿ ಕಾಜಿ ನೀಮು ಹಣ್ಣನ್ನು ಅನುಮೋದಿಸಲಾಗಿದೆ. ಇದು ನಮ್ಮ ಸರ್ಕಾರದ ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿದೆ’ ಎಂದು ರಾಜ್ಯ ಕೃಷಿ ಸಚಿವ ಅತುಲ್ ಬೋರಾ ತಿಳಿಸಿದರು.
‘ಕಾಜಿ ನೀಮುವನ್ನು ವಾಣಿಜ್ಯ ಬೆಳೆಯಾಗಿ ಅಭಿವೃದ್ದಿಪಡಿಸುವತ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಧ್ಯಪ್ರಾಚ್ಯ ಸೇರಿದಂತೆ ಹಲವಾರು ದೇಶಗಳಿಗೆ ಈ ಹಣ್ಣನ್ನು ರಫ್ತು ಮಾಡಲಾಗಿದೆ’ ಎಂದರು.
‘ಆಹಾರಕ್ಕೆ ವಿಶೇಷವಾದ ಸ್ವಾದವನ್ನು ನೀಡುವುದಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಕಾಜಿ ನೀಮು ಹಣ್ಣಿಗಿದೆ’ ಎಂದು ಹೇಳಿದರು.
‘ರಾಜ್ಯ ಹಣ್ಣು’ ಎಂದು ಕಾಜಿ ನೀಮು ಅನ್ನು ಘೋಷಿಸಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ‘ಕಾಜಿ ನೀಮು ಹಣ್ಣನ್ನು ರಾಜ್ಯ ಹಣ್ಣಾಗಿ ನಮ್ಮ ಸರ್ಕಾರ ಘೋಷಿಸಿದೆ. ಇದರಿಂದ ಕಾಜಿ ನೀಮು ಜಾಗತಿಕ ನಕ್ಷೆಯಲ್ಲಿ ಗುರುತಿಸಿಕೊಳ್ಳಲಿದ್ದು, ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಅಸ್ಸಾಂ ನಿಂಬೆ ಎಂದೇ ಹೆಸರುವಾಸಿಯಾದ ಕಾಜಿ ನೀಮು ಸ್ಥಳೀಯ ಪಾಕಪದ್ಧತಿಯನ್ನು ಶ್ರೀಮಂತಗೊಳಿಸಿದೆ’ ಎಂದರು.
ಕಾಜಿ ನೀಮು
ಆಂಗ್ಲ ಭಾಷೆಯಲ್ಲಿ ಸಿಟ್ರಸ್ ಲೆಮನ್ ಎಂದು ಕರೆಯುವ ಈ ಕಾಜಿ ನೀಮು ಅಸ್ಸಾಂನ ಪ್ರಮುಖ ಬೆಳೆಯಾಗಿದೆ. ನಿಂಬೆ ಜಾತಿಗೆ ಸೇರಿದ ಈ ಹಣ್ಣು ಉಪ್ಪಿನಕಾಯಿ ಸೇರಿದಂತೆ ವಿವಿಧ ಖಾದ್ಯಗಳಲ್ಲಿ ಬಳಕೆಯಾಗುತ್ತಿದೆ. ಅಸ್ಸಾಂನ ಪ್ರತಿ ಮನೆಯಲ್ಲಿ ಕಾಜಿ ನೀಮುವನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಮಾಡುತ್ತಾರೆ.
ನಿಂಬೆ ಹಣ್ಣಿನಂತೆ ಕಾಣುವ ಈ ಹಣ್ಣುಗಳು ನಿಂಬೆ ಹಣ್ಣಿಗೆ ಹೋಲಿಸಿದರೆ ಸ್ವಲ್ಪ ಉದ್ದವಾಗಿ ಬೆಳೆಯುತ್ತವೆ. ಹಸಿರು ಬಣ್ಣದಲ್ಲಿ ಇರುವ ಇವು ಮಾಗಿದ ನಂತರ ಹಳದಿ ಬಣ್ಣಕ್ಕೆ ತಿರುಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.