ADVERTISEMENT

ಹೊರ ರಾಜ್ಯ| ಅಸ್ಸಾಂ: ಕ್ಷೇತ್ರ ಮರುವಿಂಗಡಣೆ ಸುತ್ತ ಹಲವು ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 20:02 IST
Last Updated 28 ಮಾರ್ಚ್ 2023, 20:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಸ್ಸಾಂ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ನಡೆಯುತ್ತಿದೆ. ಕ್ಷೇತ್ರ ಮರುವಿಂಗಡಣೆಯು ಯಾವುದೇ ರಾಜ್ಯದ ಚುನಾವಣಾ ರಾಜಕೀಯದ ಅತ್ಯಂತ ಮಹತ್ವದ ಭಾಗ ಎಂದು ಪರಿಗಣಿಸಲಾಗುತ್ತದೆ. ಇದು ಅತ್ಯಂತ ಸೂಕ್ಷ್ಮ ಮತ್ತು ಹೆಚ್ಚು ಪರಿಣಾಮ ಬೀರುವಂತಹ ಪ್ರಕ್ರಿಯೆ. ಆಯಾ ರಾಜ್ಯದ ರಾಜಕೀಯ ಸಂಯೋಜನೆಯನ್ನೇ ಬದಲಿಸುವಷ್ಟು ಬಲಿಷ್ಠವಾದ ಪ್ರಕ್ರಿಯೆ ಇದು. ಹೀಗಾಗಿ ಕ್ಷೇತ್ರ ಮರುವಿಂಗಡಣೆಯು ಹಲವು ತಿಂಗಳು ನಡೆಯುತ್ತದೆ. ಅಸ್ಸಾಂನಲ್ಲಿ ನಡೆಯುತ್ತಿರುವ ಕ್ಷೇತ್ರ ಮರುವಿಂಗಡಣೆಯೂ ಬೇರೆ–ಬೇರೆ ಕಾರಣಗಳಿಗೆ ಸುದ್ದಿಯಾಗುತ್ತಿದೆ. ಎಲ್ಲಾ ಪಕ್ಷಗಳೂ ಮರುವಿಂಗಡಣೆಯನ್ನು ಸ್ವಾಗತಿಸಿವೆಯಾದರೂ, ಹಲವು ಆಕ್ಷೇಪಗಳನ್ನೂ ಎತ್ತಿವೆ. ಈ ಆಕ್ಷೇಪಗಳನ್ನು ಕಡೆಗಣಿಸಲಾಗುತ್ತಿದೆ ಎಂದೇ ಕ್ಷೇತ್ರ ಮರುವಿಂಗಡಣೆಗೆ ವಿರೋಧ ವ್ಯಕ್ತವಾಗುತ್ತಿದೆ.

ಇದು ಅತ್ಯಂತ ಸೂಕ್ಷ್ಮವಾದ ಪ್ರಕ್ರಿಯೆಯಾದ ಕಾರಣ, ಚುನಾವಣಾ ಆಯೋಗವು ನೇರವಾಗಿ ಈ ಕೆಲಸವನ್ನು ಮಾಡುವುದಿಲ್ಲ. ಬದಲಿಗೆ ಸಂವಿಧಾನದತ್ತವಾಗಿ ರಚನೆಯಾದ ಮರುವಿಂಗಡಣಾ ಆಯೋಗವು ಈ ಕೆಲಸ ಮಾಡುತ್ತದೆ. ಅಸ್ಸಾಂ ಕ್ಷೇತ್ರಗಳ ಮರುವಿಂಗಡಣೆಗೆ ಆಯೋಗವು ತನ್ನ ಪ್ರಕ್ರಿಯೆಯನ್ನು ಆರಂಭಿಸಿ ಹಲವು ತಿಂಗಳು ಕಳೆದಿವೆ. ಈ ಆಯೋಗವು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ದೇಶಿಸಿಲು ಹಲವು ಕಾನೂನು ಮತ್ತು ನಿಯಮಗಳು ಇವೆ. ಈ ಕಾನೂನುಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪವೂ ಇದೆ.

ಕ್ಷೇತ್ರ ಮರುವಿಂಗಡಣೆಗೂ ಮುನ್ನ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು, ಎಲ್ಲಾ ನೋಂದಾಯಿತ ಪಕ್ಷಗಳು, ರಾಜ್ಯದ ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಗಳು ಮತ್ತು ಗುಂಪುಗಳ ಜತೆಗೆ ಆಯೋಗವು ಸಮಾಲೋಚನೆ ನಡೆಸಬೇಕು. ಅವರು ನೀಡುವ ಸಲಹೆಗಳನ್ನು ಕೇಳಬೇಕು ಮತ್ತು ಪರಿಶೀಲಿಸಬೇಕು. ಮೊದಲ ಹಂತದ ಸಭೆಯಲ್ಲಿ ರಾಜ್ಯದ ಎಲ್ಲಾ ಪಕ್ಷಗಳೂ ಭಾಗಿಯಾಗಿದ್ದವು. ತಾವು ನೀಡಿದ್ದ ಸಲಹೆಗಳನ್ನು ಆಯೋಗವು ಪರಿಗಣಿಸಿಲ್ಲ ಎಂದು ಪಕ್ಷಗಳು ಆರೋಪಿಸಿವೆ. ಆಯೋಗವು ಈಚೆಗಷ್ಟೇ ಕರೆದಿದ್ದ ಸಭೆಗೆ ಕಾಂಗ್ರೆಸ್‌ ಗೈರುಹಾಜರಾಗಿದೆ.

ADVERTISEMENT

ಈ ಆಕ್ಷೇಪ ಮತ್ತು ಆರೋಪಗಳನ್ನು ಆಯೋಗವು ತಿರಸ್ಕರಿಸುತ್ತಲೇ ಇದೆ. ‘ಎಲ್ಲಾ ಸಲಹೆ ಮತ್ತು ಆಕ್ಷೇಪಗಳನ್ನು ಪರಿಗಣಿಸಿದ್ದೇವೆ. ಆಕ್ಷೇಪಗಳನ್ನು ದಾಖಲಿಸಲು ಏಪ್ರಿಲ್‌ 15ರವರೆಗೂ ಅವಕಾಶವಿದೆ. ಆನಂತರವಷ್ಟೇ ಕರಡು ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಅದಕ್ಕೆ ವ್ಯಕ್ತವಾಗುವ ಆಕ್ಷೇಪಗಳನ್ನೂ ಪರಿಗಣಿಸಿ, ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ’ ಎಂದು ಆಯೋಗವು ಸ್ಪಷ್ಟನೆ ನೀಡಿದೆ.

2008ರಲ್ಲಿ ಅಸ್ಸಾಂನಲ್ಲಿ ಕ್ಷೇತ್ರ ಮರುವಿಂಗಡಣೆ ಯತ್ನ ನಡೆದಿತ್ತು. ರಾಜ್ಯದ ಉತ್ತರ ಭಾಗದ ಮೂರು ಕ್ಷೇತ್ರಗಳ ಗಡಿಗಳನ್ನು ಕಡಿತಗೊಳಿಸಲು ಕರಡು ವರದಿ ಪ್ರಸ್ತಾಪಿಸಿತ್ತು. ಉತ್ತರ ಭಾಗದಲ್ಲಿ ಅಹೋಮ್ ಸಮುದಾಯ ರಾಜಕೀಯವಾಗಿ ಪ್ರಭಾವಿಯಾಗಿತ್ತು. ಹೀಗಾಗಿ ಭಾರಿ ವಿರೋಧ ವ್ಯಕ್ತವಾಗಿತ್ತು. ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದಿದ್ದವು. ಕಾನೂನು ಸುವ್ಯವಸ್ಥೆ ಕಾರಣ ಮುಂದಿಟ್ಟುಕೊಂಡು, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗಲೂ ಅಂಥದ್ದೇ ಸ್ಥಿತಿ ಎದುರಾಗುವ ಸಂದರ್ಭ ಬಂದೊದಗಿದೆ. ಕೆಲವು ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಈ ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ.

2001ರ ಜನಸಂಖ್ಯೆ ಆಧಾರ

ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲು 2001ರ ಜನಸಂಖ್ಯೆಯನ್ನು ಆಧಾರವಾಗಿ ತೆಗೆದುಕೊಳ್ಳಲಾಗಿದೆ. 2022–23ರಲ್ಲಿ ನಡೆಯುತ್ತಿರುವ ಕ್ಷೇತ್ರಮರುವಿಂಗಡಣೆ ಕಾರ್ಯಕ್ಕೆ 20 ವರ್ಷಕ್ಕಿಂತಲೂ ಹಳೆಯ ಜನಸಂಖ್ಯಾ ದತ್ತಾಂಶಗಳನ್ನು ಬಳಸಿಕೊಳ್ಳುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯದ ಹಲವು ಪಕ್ಷಗಳು ಇದನ್ನು ವಿರೋಧಿಸಿವೆ.

ರಾಜ್ಯಗಳ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಅನುಕೂಲವಾಗುವಂತೆ 2002 ಮತ್ತು 2003ರಲ್ಲಿ ಸಂವಿಧಾನಕ್ಕೆ 84ನೇ ತಿದ್ದುಪಡಿ ಮತ್ತು 87ನೇ ತಿದ್ದುಪಡಿಗಳನ್ನು ತರಲಾಗಿತ್ತು. 2026ರ ಬಳಿಕ ನಡೆಯುವ ಮೊದಲ ಜನಗಣತಿಯ ನಂತರ ನಡೆಯುವ ಮರುವಿಂಗಡಣೆಯಲ್ಲಿ ಮಾತ್ರ ಕ್ಷೇತ್ರಗಳ ಒಟ್ಟು ಸಂಖ್ಯೆಯನ್ನು ಬದಲಾಯಿಸಲು ಅವಕಾಶವಿದೆ. ಅದಕ್ಕೂ ಮೊದಲು ನಡೆಯುವ ಯಾವುದೇ ಮರುವಿಂಗಡಣೆಯಲ್ಲಿ ಕ್ಷೇತ್ರಗಳ ಗಡಿಗಳನ್ನು ಮಾತ್ರ ಮಾರ್ಪಾಡು ಮಾಡಲು ಅವಕಾಶವಿದೆ. ಅಸ್ಸಾಂನಲ್ಲಿ ಈಗ ನಡೆಯುತ್ತಿರುವ ಮರುವಿಂಗಡಣೆಯೂ ಗಡಿ ಬದಲಾವಣೆಗಷ್ಟೇ ಸೀಮಿತವಾಗಿದೆ. ರಾಜ್ಯದಲ್ಲಿ ಈಗ 126 ವಿಧಾನಸಭಾ ಕ್ಷೇತ್ರಗಳು ಮತ್ತು 14 ಲೋಕಸಭಾ ಕ್ಷೇತ್ರಗಳು ಇವೆ. ಈ ಮರುವಿಂಗಡಣೆಯ ನಂತರ ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆ ಆಗುವುದಿಲ್ಲ ಎಂದು ಮರುವಿಂಗಡಣಾ ಆಯೋಗ ಈಗಾಗಲೇ ಹೇಳಿದೆ.

2001ರ ಜನಸಂಖ್ಯೆ ಮತ್ತು ಈಗಿನ ಜನಸಂಖ್ಯೆಗೆ ಭಾರಿ ವ್ಯತ್ಯಾಸವಿದೆ. ಈ 22 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ಹಲವು ಪಟ್ಟು ಏರಿಕೆಯಾಗಿದೆ. ಹೀಗಿದ್ದಾಗ ಹಳೆಯ ಜನಗಣತಿ ದತ್ತಾಂಶಗಳನ್ನೇ ಆಧಾರವಾಗಿಟ್ಟುಕೊಂಡು ಕ್ಷೇತ್ರ ಮರುವಿಂಗಡಣೆ ಮಾಡುವುದು ವೈಜ್ಞಾನಿಕವಾಗಿ ಸರಿಯಲ್ಲ ಎಂಬುದು ವಿರೋಧ ಪಕ್ಷಗಳ ಆಕ್ಷೇಪ.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ವೇಳೆ ರಾಜಕೀಯ ಪಕ್ಷಗಳು, ಸ್ಥಳೀಯ ಸಂಘಟನೆಗಳು ನೀಡುವ ಸಲಹೆ ಮತ್ತು ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕ್ಷೇತ್ರಗಳ ಮರುವಿಂಗಡಣಾ ಮಾರ್ಗಸೂಚಿ ಹೇಳುತ್ತದೆ. ಆದರೆ, ಜನಗಣತಿ ದತ್ತಾಂಶಗಳ ಬಗ್ಗೆ ವ್ಯಕ್ತವಾಗಿರುವ ಆಕ್ಷೇಪಗಳನ್ನು ಪರಿಗಣಿಸದೆ, ಮರುವಿಂಗಡಣೆ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ ಎಂಬುದು ವಿರೋಧ ಪಕ್ಷಗಳ ಕಳವಳ.

ಆಡಳಿತ ಘಟಕಗಳ ಬದಲಾವಣೆಗೆ ಸಮರ್ಥನೆಗಳಿಲ್ಲ

‘ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಆಡಳಿತ ಘಟಕಗಳಾದ ಜಿಲ್ಲೆ, ಉಪವಿಭಾಗಗಳು, ತಾಲ್ಲೂಕುಗಳ ಗಡಿ ಮತ್ತು ವ್ಯಾಪ್ತಿ ಬದಲಾವಣೆಗೆ ಅವಕಾಶವಿಲ್ಲ’ ಎಂದು ಕ್ಷೇತ್ರಗಳ ಮರುವಿಂಗಡಣಾ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಆದರೆ ಅನಿವಾರ್ಯವಾಗಿ ಬದಲಾವಣೆ ಮಾಡಲೇಬೇಕಿದ್ದರೆ, ಅಗತ್ಯ ಕಾರಣ ಮತ್ತು ಸಮರ್ಥನೆಗಳನ್ನು ನೀಡಬೇಕು ಎಂದು ಮಾರ್ಗಸೂಚಿ ಹೇಳುತ್ತದೆ.

ಈ ಮರುವಿಂಗಡಣೆ ಸಂದರ್ಭದಲ್ಲಿ ಅಸ್ಸಾಂನ ಹಲವು ಜಿಲ್ಲೆಗಳನ್ನು ವಿಲೀನ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದ ಒಂದೇ ಜಿಲ್ಲೆಯೊಳಗಿನ ಕ್ಷೇತ್ರಗಳ ಸಂಖ್ಯೆ ಹೆಚ್ಚು ಮಾಡಲು ಅಥವಾ ಕಡಿಮೆ ಮಾಡಲು ಅವಕಾಶ ದೊರೆಯುತ್ತದೆ. ಈ ಅವಕಾಶವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಆಡಳಿತಾರೂಢ ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಹಲವು ಜಿಲ್ಲೆಗಳನ್ನು ವಿಲೀನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಘೋಷಿಸಿದ್ದರು. ಆದರೆ, ಕ್ಷೇತ್ರ ಮರುವಿಂಗಡಣಾ ಆಯೋಗವು ಈ ವಿಲೀನಕ್ಕೆ ಯಾವುದೇ ಕಾರಣ ಅಥವಾ ಸಮರ್ಥನೆಗಳನ್ನು ನೀಡಿಲ್ಲ. ಈ ನಡೆಗೆ ಕಾಂಗ್ರೆಸ್‌, ಕೆಲವು ಸ್ಥಳೀಯ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕಾರಣ ನೀಡದೇ ಆಡಳಿತ ಘಟಕಗಳನ್ನು ವಿಲೀನ ಮಾಡುತ್ತಿರುವುದರ ಹಿಂದೆ ಯಾವುದೋ ಸಂಚು ಇದೆ ಎಂದು ಆರೋಪಿಸಿವೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕೆಲವು ಹೇಳಿಕೆಗಳು ಈ ಆರೋಪಗಳಿಗೆ ಪುಷ್ಟಿ ನೀಡುವಂತಿವೆ. ಜಿಲ್ಲೆಗಳನ್ನು ವಿಲೀನ ಮಾಡುವ ಘೋಷಣೆ ಮಾಡಿದ್ದ ಅವರು, ಈ ನಿರ್ಧಾರದ ಹಿಂದಿದ್ದ ಕಾರಣಗಳನ್ನು ಬಹಿರಂಗಪಡಿಸುವುದಿಲ್ಲ ಎಂದಿದ್ದರು. ಮರುದಿನ ಪತ್ರಕರ್ತರ ಜೊತೆ ಮಾತನಾಡಿದ್ದ ಅವರು, ರಾಷ್ಟ್ರೀಯ ಪೌರತ್ವ ನೋಂದಣಿಯು (ಎನ್‌ಆರ್‌ಸಿ) ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ ಎಂದಿದ್ದರು. ಅಸ್ಸಾಂನ ಭವಿಷ್ಯ ಕಾಯ್ದುಕೊಳ್ಳಬೇಕಾದರೆ, ಕ್ಷೇತ್ರ ಪುನರ್‌ವಿಂಗಡಣೆಯೊಂದೇ ತಮ್ಮ ಮುಂದಿರುವ ದೊಡ್ಡ ಹಾಗೂ ಕೊನೆಯ ಅಸ್ತ್ರ ಎಂದು ಹೇಳಿದ್ದರು.

ಎನ್‌ಆರ್‌ಸಿ ಜಾರಿಗೆ ಪಟ್ಟು

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಸಿದ್ಧಪಡಿಸಲಾಗಿತ್ತು. ಆದರೆ, ಅದನ್ನು ಅಂತಿಮಗೊಳಿಸಿಲ್ಲ. ಇಲ್ಲಿನ ಸ್ಥಳೀಯ ಸಮುದಾಯಗಳ ಸಂಘಟನೆಗಳು ಎನ್‌ಆರ್‌ಸಿಯನ್ನು ಸಂಪೂರ್ಣವಾಗಿ ಜಾರಿಗೆ ತನ್ನಿ ಮತ್ತು ನಂತರ ಕ್ಷೇತ್ರಗಳ ಮರುವಿಂಗಡಣೆಯನ್ನು ಮಾಡಿ ಎಂದು ಒತ್ತಾಯಿಸಿವೆ.

ಎನ್‌ಆರ್‌ಸಿಯನ್ನು ಜಾರಿಗೆ ತಂದರೆ ಅಸ್ಸಾಂನಲ್ಲಿರುವ ಅಕ್ರಮ ವಲಸಿಗರು, ಬಂಗಾಳಿ ಹಿಂದೂಗಳು ಮತ್ತು ಮುಸ್ಲಿಮರು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಆಗ ರಾಜ್ಯದ ಒಟ್ಟು ಮತದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ರಾಜ್ಯದ ರಾಜಕೀಯ ಸಂಯೋಜನೆಯೇ ಬದಲಾಗುತ್ತದೆ. ಇದು ಕೆಲವು ಪಕ್ಷಗಳಿಗೆ ಪ್ರತಿಕೂಲವಾಗಿ ಪರಿಣಮಿಸಬಹುದು. ಹೀಗಾಗಿಯೇ ಎನ್‌ಆರ್‌ಸಿಯನ್ನು ತಡೆ ಹಿಡಿಯಲಾಗಿದೆ ಎಂದು ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ. ಕ್ಷೇತ್ರ ಮರುವಿಂಗಡಣೆಯನ್ನು ನಾವು ಬೆಂಬಲಿಸುತ್ತೇವೆ. ಆದರೆ, ಎನ್‌ಆರ್‌ಸಿ ಜಾರಿಯ ನಂತರವೇ ಅದನ್ನು ಮಾಡಬೇಕು. ಇಲ್ಲದೇ ಇದ್ದರೆ, ಸ್ಥಳೀಯ ಸಮುದಾಯಗಳು ಮೂಲೆಗುಂಪಾಗುತ್ತವೆ ಎಂದು ಸಂಘಟನೆಯು ಕಳವಳ ವ್ಯಕ್ತಪಡಿಸಿದೆ.

ಎನ್‌ಆರ್‌ಸಿಯನ್ನು ತರಾತುರಿಯಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿತ್ತು. ಅದು ತನಗೆ ಪ್ರತಿಕೂಲವಾಗುತ್ತದೆ ಎಂದು ಅರಿವಾದ ತಕ್ಷಣವೇ, ವರಸೆ ಬದಲಿಸಿತು. ಎನ್‌ಆರ್‌ಸಿ ಅನುಷ್ಠಾನಕ್ಕೆ ತಂದರೆ ಲಕ್ಷಾಂತರ ಸಂಖ್ಯೆಯಲ್ಲಿರುವ ಬಂಗಾಳಿ ಹಿಂದೂಗಳು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಇದು ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ. ಹೀಗಾಗಿಯೇ ರಾಜ್ಯ ಸರ್ಕಾರ ಎನ್‌ಆರ್‌ಸಿ ಜಾರಿಗೆ ತರುತ್ತಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮುಸ್ಲಿಮರ ಪ್ರಾತಿನಿಧ್ಯ ಕಡಿತಕ್ಕೆ ಯತ್ನ: ಅಸ್ಸಾಂನಲ್ಲಿ ಈಗ 31 ಮುಸ್ಲಿಂ ಶಾಸಕರಿದ್ದಾರೆ. ಇನ್ನೂ ನಾಲ್ಕು ಕ್ಷೇತ್ರಗಳಲ್ಲಿ ಮುಸ್ಲಿಮರೇ ನಿರ್ಣಾಯಕ ಮತದಾರರಾಗಿದ್ದಾರೆ. ಕ್ಷೇತ್ರ ಮರುವಿಂಗಡಣೆ ಮೂಲಕ ಈ ಸಂಖ್ಯೆಯನ್ನು 26–28ಕ್ಕೆ ಇಳಿಸಲು ಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಬೇರೆ ಸಮುದಾಯಗಳ ಪ್ರಾಬಲ್ಯವಿರುವ ಹಲವು ಕ್ಷೇತ್ರಗಳ ಜತೆಗೆ ಹಂಚಲಾಗುತ್ತಿದೆ. ಬೇರೆ ಕ್ಷೇತ್ರಗಳಲ್ಲಿ ಮುಸ್ಲಿಮೇತರ ಸಮುದಾಯಗಳ ಮತದಾರರ ಪ್ರಾಬಲ್ಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಈ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮುಸ್ಲಿಮೇತರ ಸಮುದಾಯಗಳು ನಿರ್ಣಾಯಕ ಸ್ಥಾನಕ್ಕೆ ಬರುವಂತೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಮತ್ತು ಸ್ಥಳೀಯ ಮುಸ್ಲಿಂ ಸಂಘಟನೆಗಳು ಆರೋಪಿಸಿವೆ.

ಜಮ್ಮು-ಕಾಶ್ಮೀರದಲ್ಲೂ ವಿರೋಧ

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಇತ್ತೀಚೆಗೆ ನಡೆದಿತ್ತು. ಈ ಪ್ರಕ್ರಿಯೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಕೇಂದ್ರ ಸರ್ಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದರು.

ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷಾಧಿಕಾರವನ್ನು 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಅಲ್ಲದೇ ರಾಜ್ಯದ ಸ್ಥಾನಮಾನವನ್ನು ತೆಗೆದುಹಾಕಿ, ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಾಗಿತ್ತು. ಅಲ್ಲಿಂದ ಈವರೆಗೆ ಇಲ್ಲಿನ ವಿಧಾನಸಭೆಗೆ ಚುನಾವಣೆ ನಡೆದಿಲ್ಲ. ಚುನಾವಣೆಗೂ ಮುನ್ನ ಕ್ಷೇತ್ರಗಳನ್ನು ಪುನರ್‌ವಿಂಗಡಣೆ ಮಾಡಲು ಆಯೋಗವನ್ನು ರಚಿಸಲಾಗಿತ್ತು. ಆಯೋಗವು ವರದಿ ಸಲ್ಲಿಸಿದ್ದು, 83 ಕ್ಷೇತ್ರಗಳನ್ನು 90ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ ಸೇರ್ಪಡೆಮಾಡಲಾಗಿರುವ ಏಳು ಕ್ಷೇತ್ರಗಳ ಪೈಕಿ ಜಮ್ಮುವಿಗೆ ಆರು ಹಾಗೂ ಕಾಶ್ಮೀರಕ್ಕೆ ಒಂದು ಕ್ಷೇತ್ರವನ್ನು ಹಂಚಿಕೆ ಮಾಡಲಾಗಿದೆ. ಈ ಪರಿಷ್ಕರಣೆಗೆ ವಿರೋಧ ವ್ಯಕ್ತವಾಗಿದೆ. ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಲು ಅವಕಾಶ ಇಲ್ಲದಿದ್ದರೂ ಹೆಚ್ಚಿಸಿರುವುದಕ್ಕೆ ಆಕ್ಷೇಪ ಬಂದಿದೆ.

1976ರಲ್ಲಿ ನಡೆದಿತ್ತು

1971ರ ಜನಗಣತಿ ಆಧಾರದಲ್ಲಿ ಅಸ್ಸಾಂನಲ್ಲಿ ಕೊನೆಯದಾಗಿ 1976ರಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದಿತ್ತು. 2008ರಲ್ಲಿ ಇಂತಹ ಯತ್ನ ನಡೆದಿತ್ತಾದರೂ, ವಿರೋಧದಿಂದಾಗಿ ಅದು ಪೂರ್ಣಗೊಂಡಿರಲಿಲ್ಲ.

ಪ್ರತೀ ಜನಗಣತಿ ಬಳಿಕ ಕ್ಷೇತ್ರಗಳ ಮರುವಿಂಗಡಣೆ ಮಾಡಬೇಕು ಎಂಬ ನಿಯಮವಿದೆ. ಸಂವಿಧಾನದ 82ನೇ ವಿಧಿಯ ಅಡಿ ಕ್ಷೇತ್ರ ಮರುವಿಂಗಡಣೆ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿತ್ತು. ಈ ಪ್ರಕ್ರಿಯೆಯನ್ನು ಕೈಗೊಳ್ಳಲು ಕ್ಷೇತ್ರ ಮರುವಿಂಗಡಣೆ ಆಯೋಗ ಎಂಬ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ. ಈ ಆಯೋಗವು ತೆಗೆದುಕೊಳ್ಳುವ ಕ್ಷೇತ್ರ ಮರುವಿಂಗಡಣೆ ನಿರ್ಧಾರಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್ಲ.

ಆಧಾರ: ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣಾ ಮಾರ್ಗಸೂಚಿಗಳು, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.