ಗುವಾಹಟಿ: ಬ್ರಹ್ಮಪುತ್ರ ನದಿಯ ಪೂರ್ವಭಾಗದ ದಂಡೆಯ ಮೇಲೆ ಕಳೆದ 40 ವರ್ಷಗಳಿಂದ ಆಸ್ಸಾಂ ಜನ ಆ ವ್ಯಕ್ತಿಯನ್ನು ನೋಡುತ್ತಲೇ ಇದ್ದಾರೆ. ಬೆಂಗಾಡಾಗಿದ್ದ ಆ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದ ಆ ವ್ಯಕ್ತಿ ನೋಡ ನೋಡುತ್ತಿದ್ದಂತೆಯೇ 1,360 ಎಕರೆ ವಿಸ್ತೀರ್ಣದ ಕಾಡಿನ ಜನ್ಮಕ್ಕೆ ಕಾರಣವಾಗಿದ್ದಾರೆ.
ಈ ಕಾಡು ಈಗ ವನ್ಯಜೀವಿಗಳಿಗೂ ಆಶ್ರಯ ತಾಣವಾಗಿದೆ. ಅದಕ್ಕೆ ಕಾರಣವಾದ ಜಾದವ್ ಪಯೇಂಗ್ ಅವರು ಭಾರತ ಕಾಡಿನ ಮನುಷ್ಯ ಎಂದೇ ಹೆಸರಾಗಿದ್ದಾರೆ!
ಪರಿಸರ ಸಂರಕ್ಷಣೆಯಲ್ಲಿ ಪಯೇಂಗ್ ಅವರು ಮಾಡಿರುವ ಕೆಲಸಕ್ಕೆ ಇದೀಗ ‘128ನೇ ಕಾಮನ್‌ವೆಲ್ತ್ ಪಾಯಿಂಟ್ಸ್ ಆಫ್ ಲೈಟ್’ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯೊಂದಿಗೆ ಎರಡನೇ ಕ್ವೀನ್ ಎಲಿಜಬೆತ್ ಅವರ ಸಹಿ ಇರುವ ಪ್ರಮಾಣಪತ್ರವೂ ಇರುವುದು ವಿಶೇಷವಾಗಿದೆ.
ಕೋಲ್ಕತ್ತದಲ್ಲಿರುವ ಬ್ರಿಟಿಷ್ ರಾಯಭಾರ ಕಚೇರಿಯ ಉಪ ಆಯುಕ್ತ ನಿಕೋಲಾಸ್ ಲವ್ ಅವರು ಗುವಾಹಟಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪಯೇಂಗ್ ಅವರಿಗೆ ಹಸ್ತಾಂತರಿಸಿದರು.
ಮಜುಲಿ ದ್ವೀಪವನ್ನೂ ಒಳಗೊಂಡ ಬ್ರಹ್ಮಪುತ್ರದ ಈ ಮರಳಕಟ್ಟೆಯಲ್ಲಿ ತಾಪಮಾನದ ಏರಿಕೆಯನ್ನು 40 ವರ್ಷಗಳಷ್ಟು ಹಿಂದೆಯೇ ಗುರ್ತಿಸಿದ ಪಯೇಂಗ್ ಅವರು, ಸಸಿಗಳನ್ನು ನೆಡುವ ಕೆಲಸವನ್ನು ಆರಂಭಿಸಿದ್ದರು. ನದಿಯಿಂದ ನೀರು ಹೊತ್ತು ತಂದು ಅವುಗಳಿಗೆ ಉಣಿಸುತ್ತಿದ್ದರು. ವರ್ಷಗಳು ಉರುಳಿದಂತೆ ಮರುಭೂಮಿಯಂತಿದ್ದ ಪ್ರದೇಶ ಹಸಿರಿನಿಂದ ಕಂಗೊಳಿಸಲು ಆರಂಭಿಸಿತು.
ಪಯೇಂಗ್ ಅವರು ಬೆಳೆಸಿದ ಅರಣ್ಯವೀಗ ಜೀವವೈವಿಧ್ಯದ ತಾಣವಾಗಿದೆ. ವಿನಾಶದ ಅಂಚಿನಲ್ಲಿರುವ ಪ್ರಭೇದಗಳಿಗೂ ಆವಾಸಸ್ಥಾನವಾಗಿದೆ. ಅದರಲ್ಲಿ ಬಂಗಾಳದ ಹುಲಿ ಮತ್ತು ರಣಹದ್ದುಗಳು ಸೇರಿವೆ. ಬ್ರಹ್ಮಪುತ್ರದ ನದಿಗುಂಟ ಐದು ಸಾವಿರ ಎಕರೆಗೆ ಅರಣ್ಯವನ್ನು ವಿಸ್ತರಿಸುವ ಕನಸು ಪಯೇಂಗ್ ಅವರದಾಗಿದೆ.
‘ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಸನ್ನದ್ಧವಾಗಿರುವ ನಮಗೆ ಪಯೇಂಗ್ ಅವರ ಕಾರ್ಯ ಸ್ಫೂರ್ತಿ ತುಂಬುತ್ತದೆ’ ಎಂದು ಭಾರತದಲ್ಲಿನ ಬ್ರಿಟಿಷ್ ರಾಯಭಾರಿ ಜಾನ್ ಥಾಮ್ಸನ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.