ADVERTISEMENT

ಅಸ್ಸಾಂ ವಿಧಾನಸಭೆಗೆ 2ನೇ ಹಂತದ ಚುನಾವಣೆ: 28 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಪಿಟಿಐ
Published 16 ಮಾರ್ಚ್ 2021, 6:32 IST
Last Updated 16 ಮಾರ್ಚ್ 2021, 6:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಅಸ್ಸಾಂ ವಿಧಾನಸಭೆಯ ಎರಡನೇ ಹಂತದ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಕೆಯಾಗಿದ್ದ 28 ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲನೆ ವೇಳೆ ತಿರಸ್ಕರಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

ಏಪ್ರಿಲ್ 1 ರಂದು ಚುನಾವಣೆ ನಡೆಯಲಿರುವ 39 ಕ್ಷೇತ್ರಗಳಿಗೆ ಒಟ್ಟು 408 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು ಮತ್ತು ಈ ಪೈಕಿ 28 ನಾಮಪತ್ರಗಳನ್ನು ಸೋಮವಾರ ಪರಿಶೀಲನೆಯ ಸಮಯದಲ್ಲಿ ತಿರಸ್ಕರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಎರಡನೇ ಹಂತದ ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯಲು ಮಾರ್ಚ್ 17 ಕೊನೆಯ ದಿನಾಂಕ ಆಗಿದೆ.

ADVERTISEMENT

ಈ ಮಧ್ಯೆ, ಏಪ್ರಿಲ್ 6ರಂದು ನಡೆಯಲಿರುವ ಮೂರನೇ ಮತ್ತು ಅಂತಿಮ ಹಂತದ ಚುನಾವಣೆಗೆ ಈವರೆಗೆ ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಬಾರಾಮಾದ ಕೊರಾಜಾರ್ ಲೋಕಸಭಾ ಕೇತ್ರದ ಸಂಸದ ನಬಾ ಕುಮಾರ್ ಸರನಿಯಾ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ಅಭಯಪುರಿ ಉತ್ತರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಭೂಪನ್ ರಾಯ್ ಅಭಯಪುರಿ ನಾಮಪತ್ರ ಸಲ್ಲಿಸಿದ್ದಾರೆ.

ಮೂರನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 19 ಕೊನೆ ದಿನಾಂಕವಾಗಿದ್ದು, ನಾಮಪತ್ರ ಪರಿಶೀಲನೆಯು ಮಾರ್ಚ್ 20 ರಂದು ನಡೆಯಲಿದೆ ಮತ್ತು ಮಾರ್ಚ್ 22 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.

ಮಾರ್ಚ್ 27 ರಂದು 47 ಕ್ಷೇತ್ರಗಳಿಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗೆ 267 ಸ್ಪರ್ಧಿಗಳು ಕಣದಲ್ಲಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ (ಮಜುಲಿ), ಸ್ಪೀಕರ್ ಹಿತೇಂದ್ರ ನಾಥ್ ಗೋಸ್ವಾಮಿ (ಜೋರ್ಹತ್), ಸಚಿವರಾದ ರಂಜಿತ್ ದತ್ತಾ (ಬೆಹಾಲಿ), ನಬಾ ಕುಮಾರ್ ಡೋಲೆ (ಜೊನಾಯ್) ಮತ್ತು ಸಂಜೋಯ್ ಕಿಶನ್ (ಟಿನ್ಸುಕಿಯಾ) ಮಂತ್ರಿಗಳಾದ ಅತುಲ್ ಬೋರಾ (ಬೊಕಾಖಾಟ್) ಮತ್ತು ಕೇಶಬ್ ಮಹಾಂತ (ಕಲಿಯಾಬೋರ್) ಇನ್ನು ಮುಂತಾದವರು ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.