ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೆ 26 ಜಿಲ್ಲೆಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ರಾಜ್ಯದ ಹಲವೆಡೆ ಪ್ರಮುಖ ನದಿಗಳ ನೀರಿನ ಮಟ್ಟ ಕೊಂಚ ಕಡಿಮೆಯಾಗಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಕ್ಯಾಚಾರ್‌ನಲ್ಲಿ ಇಬ್ಬರು, ಧುಬ್ರಿ, ಧೇಮಾಜಿ, ಸೌತ್ ಸಲ್ಮಾರಾ, ನಾಗಾಂವ್ ಮತ್ತು ಶಿವಸಾಗರ್‌ನಲ್ಲಿ ತಲಾ ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಈ ವರ್ಷದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತ ಸಂಬಂಧಿತ ಅವಘಡಗಳಲ್ಲಿ ಸತ್ತವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಪ್ರವಾಹ ಸಂಬಂಧಿತ ಅವಘಡಗಳಲ್ಲಿಯೇ 79 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಇತ್ತೀಚೆಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಅತ್ಯಂತ ಭೀಕರವಾದ ಪ್ರವಾಹವನ್ನು ಎದುರಿಸಿದೆ, ಇದರ ಪರಿಣಾಮವಾಗಿ ಸುಮಾರು 159 ಪ್ರಾಣಿಗಳು ಮೃತಪಟ್ಟರೆ, 133 ಪ್ರಾಣಿಗಳನ್ನು ರಕ್ಷಣಾ ಪಡೆ ರಕ್ಷಿಸಿದೆ.
ಪ್ರವಾಹ ಸಂಬಂಧಿತ ಅವಘಡಗಳಲ್ಲಿ ಸುಮಾರು 38,870.3 ಹೆಕ್ಟೇರ್ ಬೆಳೆ ಜಲಾವೃತವಾಗಿದೆ. ಮೂಲಸೌಕರ್ಯಗಳು ರಸ್ತೆಗಳು, ಸೇತುವೆಗಳು ಹಾಳಾಗಿವೆ ಎಂದು ಪ್ರಾಧಿಕಾರ ತಿಳಿಸಿದೆ. ಬ್ರಹ್ಮಪುತ್ರ ಸೇರಿದಂತೆ ಕೆಲವು ನದಿಗಳ ನೀರಿನ ಮಟ್ಟವೂ ಈಗಲೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.