ಗುವಾಹಟಿ: ಪ್ರವಾಹದಿಂದ ತತ್ತರಿಸಿರುವ ಅಸ್ಸಾಂನಲ್ಲಿ ಶುಕ್ರವಾರ ಮತ್ತಿಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 116ಕ್ಕೆ ಏರಿಕೆ ಆಗಿದೆ. ಆರು ಜಿಲ್ಲೆಗಳ 18 ಸಾವಿರಕ್ಕೂ ಹೆಚ್ಚು ಮಂದಿ ಈಗಲೂ ಸಂಕಷ್ಟದ ಸ್ಥಿತಿಯಲ್ಲೇ ಇದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಗೋಲಾಘಾಟ್ ಜಿಲ್ಲೆಯಿಂದ ಈ ಎರಡು ಸಾವುಗಳು ವರದಿಯಾಗಿವೆ. ಇದು ಪ್ರವಾಹದಿಂದ ಅತ್ಯಂತ ಹೆಚ್ಚು ಸಂಕಷ್ಟಕ್ಕೀಡಾಗಿರುವ ಜಿಲ್ಲೆಯಾಗಿದ್ದು, 13,600ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.
ಗೋಲಾಘಾಟ್ ಜೊತೆ ಜೋರ್ಹಾಟ್, ಕಬ್ರಿ ಆಂಗ್ಲೋಂಗ್, ಧೇಮಾಜಿ, ನಗಾಂವ್ ಮತ್ತು ಶಿವ್‌ಸಾಗರ್ ಹೆಚ್ಚು ಬಾಧಿತವಾಗಿರುವ ಜಿಲ್ಲೆಗಳು.
ಸ್ಥಳಾಂತರಗೊಂಡ 841 ಜನರನ್ನು ಒಂಬತ್ತು ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. 23 ಪರಿಹಾರ ಕೇಂದ್ರಗಳು 5,331 ಜನರ ಯೋಗಕ್ಷೇಮ ನೋಡಿಕೊಳ್ಳುತ್ತಿವೆ.
ಕಳೆದ 24 ಗಂಟೆಯಲ್ಲಿ 3,745 ಹೆಕ್ಟೇರ್ ಎಕರೆ ಕೃಷಿಭೂಮಿ ನೆರೆಯಲ್ಲಿ ಮುಳುಗಿದೆ. 6,106 ಜಾನುವಾರುಗಳು ನಾಪತ್ತೆಯಾಗಿವೆ. ಧನಸಿರಿ ನದಿಯು ನುಮಾಲಿಗಢದಲ್ಲಿ ಅಪಾಯ ಸ್ಥಿತಿ ಮೀರಿ ಹರಿಯುತ್ತಿದೆ ಎಂದು ಎಎಸ್‌ಡಿಎಂಎ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.