ADVERTISEMENT

ಅಸ್ಸಾಂ ಸರ್ಕಾರ ಭಾರತದಲ್ಲೇ ಅತಿ ಭ್ರಷ್ಟ: ರಾಹುಲ್‌

ಪಿಟಿಐ
Published 18 ಜನವರಿ 2024, 15:30 IST
Last Updated 18 ಜನವರಿ 2024, 15:30 IST
**EDS: IMAGE VIA AICC** Congress leader Rahul Gandhi during the Bharat Jodo Nyay Yatra, on Thursday, Jan. 18, 2024. (PTI Photo)(PTI01_18_2024_000113A)
**EDS: IMAGE VIA AICC** Congress leader Rahul Gandhi during the Bharat Jodo Nyay Yatra, on Thursday, Jan. 18, 2024. (PTI Photo)(PTI01_18_2024_000113A)   

ಶಿವಸಾಗರ್‌/ಜೋರ್‌ಹಾಟ್‌ (ಅಸ್ಸಾಂ): ಅಸ್ಸಾಂನಲ್ಲಿರುವುದು ಭಾರತದ ಅತ್ಯಂತ ಭ್ರಷ್ಟ ಸರ್ಕಾರ ಮತ್ತು ಇಲ್ಲಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.

‘ಭಾರತ ಜೋಡೊ ನ್ಯಾಯ ಯಾತ್ರೆ’ಯು ಗುರುವಾರ ನಾಗಾಲ್ಯಾಂಡ್‌ನಿಂದ  ಅಸ್ಸಾಂ ಪ್ರವೇಶಿಸಿದ ಬಳಿಕ ಅವರು ಹೆಲೋಎಟಿಂಗ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

‘ಆಡಳಿತಾರೂಢ ಬಿಜೆಪಿಯು ದ್ವೇಷ ಭಾವನೆಯನ್ನು ಹರಡುತ್ತಿದೆ ಮತ್ತು ಜನರ ಹಣ ಲೂಟಿ ಮಾಡುತ್ತಿದೆ. ಇಲ್ಲಿ ಏನಾಗುತ್ತಿದೆ ಎಂದು ಬಹುಶಃ ನಿಮಗೆ ಗೊತ್ತಿದೆ. ಯಾತ್ರೆಯ ಸಂದರ್ಭದಲ್ಲಿ ನಾವು ಅಸ್ಸಾಂ ವಿಷಯ ಪ್ರಸ್ತಾಪಿಸುತ್ತೇವೆ’ ಎಂದರು. 

ADVERTISEMENT

ದೇಬರ್‌ಪರ್‌ನಲ್ಲಿ ಮಾರ್ಗದ ಬದಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂನ ಸ್ಥಳೀಯ ಸಮುದಾಯಗಳಿಗೆ, ಟೀ ಕಾರ್ಮಿಕರಿಗೆ ಮತ್ತು ಬುಡಕಟ್ಟು ಜನರಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಆಪಾದಿಸಿದರು. 

ಮಣಿಪುರದಲ್ಲಿ ಜನಾಂಗೀಯ ಸಂಘರ್ಷದ ವಾತಾವರಣವಿದೆ. ಆದರೂ ಪ್ರಧಾನಿ ಅಲ್ಲಿಗೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಟೀಕಿಸಿದರು.

‘ತಿಂಗಳುಗಳಿಂದ ಅಲ್ಲಿ ಹಿಂಸಾಚಾರ ಮುಂದುವರಿದಿದೆ. ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಮತ್ತು ಮನೆಗಳು ಅಗ್ನಿಗೆ ಆಹುತಿಯಾಗಿವೆ. ಈವರೆಗೂ ಅಲ್ಲಿ ಶಾಂತಿ ಮರಳಿಲ್ಲ’ ಎಂದೂ ಹೇಳಿದರು.

ಇಂತಹ ಯಾತ್ರೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷದ ಭಾರತ ಜೋಡೊ ಯಾತ್ರೆಯು ದೇಶದ ರಾಜಕೀಯ ನಿರೂಪಣೆಯನ್ನು ಬದಲಾಯಿಸಿದೆ ಎಂದರು.

ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅನ್ಯಾಯವನ್ನು ಎದುರಿಸುತ್ತಿವೆ. ಬಡವರು ಮತ್ತು ತಳಮಟ್ಟದ ಸಮುದಾಯದವರಿಗೆ ತೊಂದರೆಯಾಗಿದೆ. ಈ ಎಲ್ಲಾ ವಿಷಯವನ್ನು ಯಾತ್ರೆ ವೇಳೆ ಪ್ರಸ್ತಾಪಿಸಲಾಗುತ್ತಿದೆ ಎಂದು ವಿವರಿಸಿದರು.

ಯಾತ್ರೆಯು ದೇಶದ  ಪ್ರತಿ ಧರ್ಮ, ಜಾತಿ ಮತ್ತು ಭಾಷೆಯನ್ನು ಒಂದುಗೂಡಿಸುವುದಲ್ಲದೆ ನ್ಯಾಯ ದೊರಕುವಂತೆಯೂ ಮಾಡಲಿದೆ ಎಂದರು.

ಜೋರಟ್‌ ಜಿಲ್ಲೆಯಲ್ಲಿ ಹೊಸದಾಗಿ ಘೋಷಿಸಿದ ಸರ್ಕಾರಿ ಯೋಜನೆಗಾಗಿ ಅರ್ಜಿಗಳನ್ನು ಸಂಗ್ರಹಿಸಲು ನೂರಾರು ಸಂಖ್ಯೆಯಲ್ಲಿ ಗ್ರಾಮೀಣ ಮಹಿಳೆಯರು ಸೇರಿದ್ದರು. ಯಾತ್ರೆ ಬರುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ಸರತಿ ಸಾಲು ಬಿಟ್ಟು ರಾಹುಲ್‌ ಅವರತ್ತ ದೌಡಾಯಿಸಿದರು. ರಾಹುಲ್‌ ಅವರು ಬಸ್ಸಿನಿಂದ ಹೊರಬಂದು ಅವರ ಕುಶಲೋಪರಿ ವಿಚಾರಿಸಿದರು. ಅವರು ತಡೆಯಲು ಯತ್ನಿಸಿದರೂ ಕೆಲ ಮಹಿಳೆಯರು ಅವರ ಪಾದ ಮುಟ್ಟಿ ನಮಸ್ಕರಿಸಿದರು. ಕೆಲವರು ರಾಹುಲ್‌ ಜತೆ ಚಿತ್ರ ತೆಗೆಸಿಕೊಂಡು ಸಂಭ್ರಮಿಸಿದರು. 

ದೇಶದಲ್ಲಿ ಗಾಂಧಿ ಕುಟುಂಬ ಅತ್ಯಂತ ಭ್ರಷ್ಟ ಕುಟುಂಬ. ಇದು ನ್ಯಾಯ ಯಾತ್ರೆಯಲ್ಲ. ಎಲ್ಲಿ ಮುಸ್ಲಿಮರು ಇರುತ್ತಾರೊ ಅಲ್ಲಿಗೆ ಅವರು ಭೇಟಿ ನೀಡುತ್ತಾರೆ.
-ಹಿಮಂತ್‌ ಬಿಸ್ವಾ ಶರ್ಮ ಅಸ್ಸಾಂ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.