ಗುವಾಹಟಿ: ಅಸ್ಸಾಂ ಮತ್ತು ಮಿಜೋರಾಂ ನಡುವಣ ಗಡಿ ಸಂಘರ್ಷದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ಮತ್ತು ಕಲ್ಲುತೂರಾಟದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರ ವಾಗ್ವಾದ ನಡೆಸಿದ್ದಾರೆ.
ಈ ರಾಜ್ಯಗಳ ನಡುವಣ ಗಡಿ ಸಂಘರ್ಷ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆ ನಡೆಸಿದ ಎರಡೇ ದಿನದಲ್ಲಿ ಈ ಹಿಂಸಾಚಾರ ನಡೆದಿದೆ.ದಕ್ಷಿಣ ಅಸ್ಸಾಂನ ಕಚಾರ್ ಜಿಲ್ಲೆ ಮತ್ತು ಮಿಜೋರಾಂನ ಕೊಲಾಸಿಬ್ ಜಿಲ್ಲೆಗಳು ಗಡಿ ಹಂಚಿಕೊಂಡಿವೆ. ಅಂತರರಾಜ್ಯ ಗಡಿಯಲ್ಲಿರುವ ಅಸ್ಸಾಂನ ಗಡಿಠಾಣೆಯ ಬಳಿ ಘರ್ಷಣೆ ನಡೆದಿದೆ.
‘ಬೆಳಿಗ್ಗೆ 11.30ರ ಹೊತ್ತಿಗೆ ಅಸ್ಸಾಂನ 200ಕ್ಕೂ ಹೆಚ್ಚು ಪೊಲೀಸರು ನಮ್ಮ ಗಡಿಯೊಳಗೆ ಇರುವ ಆಟೊರಿಕ್ಷಾ ನಿಲ್ದಾಣಕ್ಕೆ ಬಂದು, ಅಲ್ಲಿದ್ದ ಮಿಜೋರಾಂ ಪೊಲೀಸರನ್ನು ಒತ್ತಾಯಪೂರ್ವಕವಾಗಿ ಹಿಮ್ಮೆಟ್ಟಿಸಿದ್ದಾರೆ. ವಾಹನಗಳನ್ನು ಧ್ವಂಸ ಮಾಡಿದ್ದಾರೆ. ನಮ್ಮ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ’ ಎಂದು ಮಿಜೋರಾಂ ಮುಖ್ಯಮಂತ್ರಿ ಜೋರಮಾಥಂಗಾ ಅವರು ಹೇಳಿದ್ದಾರೆ.
‘ನಮ್ಮ ಪೊಲೀಸ್ ಗಡಿಠಾಣೆಯನ್ನು ಮಿಜೋರಾಂ ಪೊಲೀಸರು ಆಕ್ರಮಿಸಿಕೊಂಡಿದ್ದರು. ಅದನ್ನು ಮರಳಿ ನಿಯಂತ್ರಣಕ್ಕೆ ತೆಗದುಕೊಂಡಿದ್ದೇವೆ. ಈ ಪ್ರಕ್ರಿಯೆಯಲ್ಲಿ ಸಂಘರ್ಷ ನಡೆದಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.