ADVERTISEMENT

ಗುವಾಹಟಿ ವಿ.ವಿ ಅಂಕಪಟ್ಟಿ ಅಕ್ರಮ: ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

ಪಿಟಿಐ
Published 30 ಜೂನ್ 2024, 10:01 IST
Last Updated 30 ಜೂನ್ 2024, 10:01 IST
   

ಬಾರಪೇಟ (ಅಸ್ಸಾಂ): ಗುವಾಹಟಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಂಕಪಟ್ಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಮತ್ತೊಬ್ಬನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಈವರೆಗೆ ಬಂಧಿತರ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದರ್ರಾಂಗ್ ಜಿಲ್ಲೆಯ ದಲ್ಗಾಂವ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಬಳಿಕ ಹೌಲಿ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ, ಪ್ರಮುಖ ಆರೋಪಿ ಸೇರಿದಂತೆ 9 ಜನರನ್ನು ಗುವಾಹಟಿ, ಬಾರಪೇಟ, ದರ್ರಾಂಗ್‌ ಮತ್ತು ಧುಬ್ರಿಯಲ್ಲಿ ಬಂಧಿಸಲಾಗಿತ್ತು.

ADVERTISEMENT

ಮುಖ್ಯಮಂತ್ರಿ ಹಿಮಂತ ಬಿಸ್ವಾ ಅವರು ಗುರುವಾರ ಬಾರಪೇಟದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಅಂಕಪಟ್ಟಿ ಅಕ್ರಮದ ಬಗ್ಗೆ ಬಹಿರಂಗಪಡಿಸಿದ್ದರು.

‘ಗಣಕೀಕೃತ ಅಂಕಪಟ್ಟಿ ನಿರ್ವಹಣೆ ಮಾಡುವವರು, ಹಣ ನೀಡಿದವರಿಗೆ ಹೆಚ್ಚು ಅಂಕಗಳನ್ನು ನೀಡುತ್ತಿದ್ದಾರೆ. ನಿರ್ವಾಹಕರು ಸುಲಭವಾಗಿ ಅಂಕಗಳನ್ನು ಹೆಚ್ಚು, ಕಡಿಮೆ ಮಾಡುತ್ತಿದ್ದಾರೆ. ಇತರ ವಿಶ್ವವಿದ್ಯಾಲಯಗಳಲ್ಲೂ ಇಂತಹ ಪ್ರಕರಣಗಳು ನಡೆದಿರಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದರು.

‘ಬಾರಪೇಟದಲ್ಲಿ ಈ ರೀತಿಯ 6–7 ಪ್ರಕರಣಗಳು ಬೆಳಕಿಗೆ ಬಂದಿವೆ. ಪೊಲೀಸ್‌ ಇಲಾಖೆ ಮತ್ತು ಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದೆ. ಗಣಕೀಕೃತ ಅಂಕಪಟ್ಟಿ ವ್ಯವಸ್ಥೆಯ ಉಸ್ತುವಾರಿ ನೋಡುಕೊಳ್ಳುತ್ತಿದ್ದ ವ್ಯಕ್ತಿ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದರು.

ಬಾರಪೇಟದ ಗಣೇಶ್‌ ಲಾಲ್‌ ಚೌಧರಿ ಕಾಲೇಜಿನ ಅಧಿಕಾರಿಗಳು ವಿದ್ಯಾರ್ಥಿಯೊಬ್ಬನ ಅಂಕಗಳಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಿದ ಬಳಿಕ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.