ADVERTISEMENT

ಮೋದಿ ಬಗ್ಗೆ ಟ್ವೀಟ್; ಶಾಸಕ ಜಿಗ್ನೇಶ್ ಮೆವಾನಿ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್‌

ಸತೀಶ್ ಝಾ
Published 21 ಏಪ್ರಿಲ್ 2022, 7:39 IST
Last Updated 21 ಏಪ್ರಿಲ್ 2022, 7:39 IST
ಶಾಸಕ ಜಿಗ್ನೇಶ್ ಮೆವಾನಿ ಅವರನ್ನು ವಶಕ್ಕೆ ಪಡೆದ ಅಸ್ಸಾಂ ಪೊಲೀಸ್
ಶಾಸಕ ಜಿಗ್ನೇಶ್ ಮೆವಾನಿ ಅವರನ್ನು ವಶಕ್ಕೆ ಪಡೆದ ಅಸ್ಸಾಂ ಪೊಲೀಸ್   

ಅಹಮದಾಬಾದ್‌: ವಡಗಾಮ್ ಕ್ಷೇತ್ರದ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರನ್ನು ಅಸ್ಸಾಂ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

'ಗೋಡ್ಸೆಯನ್ನು ದೇವರಾಗಿ ಕಾಣುವ' ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಕೋಮುಗಳ ನಡುವಿನ ಸಂಘರ್ಷದ ವಿರುದ್ಧ ಮಾತನಾಡಬೇಕು, ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಬೇಕು ಎಂಬರ್ಥದ ಟ್ವೀಟ್‌ಗಳನ್ನು ಜಿಗ್ನೇಶ್‌ ಮಾಡಿದ್ದಾರೆ. ಆ ಬಗ್ಗೆ ದಾಖಲಾಗಿರುವ ದೂರಿನ ಅನ್ವಯ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಅಸ್ಸಾಂ ನಾಲ್ವರು ಪೊಲೀಸರನ್ನು ಒಳಗೊಂಡ ತಂಡವು ಬನಾಸಕಾಂಠಾದ ಪಾಲನ್ಪುರ್‌ನ ಅತಿಥಿ ಗೃಹದಿಂದ ಜಿಗ್ನೇಶ್ ಅವರನ್ನು ವಶಕ್ಕೆ ಪಡೆದಿದೆ. ಜಿಗ್ನೇಶ್‌ ಅವರ ವಿರುದ್ಧದ ಆರೋಪಗಳ ಕುರಿತು ಪೊಲೀಸರು ವಿವರ ನೀಡಲಿಲ್ಲ. ಕಾಂಗ್ರೆಸ್‌ ಮುಖಂಡರು ಹಾಗೂ ಬೆಂಬಲಿಗರು ಅಹಮದಾಬಾದ್‌ ವಿಮಾನನಿಲ್ದಾಣದಲ್ಲಿ ರಂಪಾಟ ಆರಂಭಿಸುತ್ತಿದ್ದಂತೆ, ಟ್ವೀಟ್‌ಗಳ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಜಿಗ್ನೇಶ್ ಅವರನ್ನು ವಶಕ್ಕೆ ಪಡೆಯುತ್ತಿರುವ ಬಗ್ಗೆ ದಾಖಲೆ ಬಹಿರಂಗ ಪಡಿಸಿದ್ದಾರೆ.

ADVERTISEMENT

ಅಸ್ಸಾಂ ಕೋಕರಾಝಾರ್‌ ಜಿಲ್ಲೆಯಲ್ಲಿ ಅನುಪ್‌ ಕುಮಾರ್‌ ಡೇ ಎಂಬುವವರು ಜಿಗ್ನೇಶ್‌ ಅವರ ವಿರುದ್ಧ ದೂರು ನೀಡಿದ್ದಾರೆ. ಸೆಕ್ಷನ್‌ 120ಬಿ (ಅಪರಾಧ ಸಂಚು), ಸೆಕ್ಷನ್‌ 153 (ಎ) (ಎರಡು ಸಮುದಾಯಗಳ ನಡುವೆ ದ್ವೇಷ ಹಂಚುವುದು), 295 (ಎ) (ಧಾರ್ಮಿಕ ಭಾವನೆಗೆ ಧಕ್ಕೆ ತರಲು ಪ್ರಾರ್ಥನಾ ಸ್ಥಳಕ್ಕೆ ಕಳಂಕ ಉಂಟು ಮಾಡುವುದು), 506 (ಅಪರಾಧದ ಬೆದರಿಕೆ) ಹಾಗೂ ಐಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏಪ್ರಿಲ್‌ 18ರಂದು ಜಿಗ್ನೇಶ್‌ ಅವರು ಮಾಡಿರುವ ಟ್ವೀಟ್‌ಗಳ ವಿರುದ್ಧ ಈ ಪ್ರಕರಣ ದಾಖಲಾಗಿದೆ. 'ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರಾಗಿ ಕಾಣುತ್ತಾರೆ ಹಾಗೂ ಪೂಜಿಸುತ್ತಾರೆ. ಕೋಮು ಗಲಭೆ ನಡೆದಿರುವ ಹಿಮ್ಮತ್‌ನಗರ, ಕಂಭಾತ್‌ ಹಾಗೂ ವೆರಾವಲ್‌ನಲ್ಲಿ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಪ್ರಧಾನಿ ಏಪ್ರಿಲ್‌ 20ಕ್ಕೆ ಗುಜರಾತ್‌ಗೆ ಭೇಟಿ ನೀಡಿದಾಗ ಆಗ್ರಹಿಸಬೇಕು' ಎಂದು ಟ್ವೀಟಿನಲ್ಲಿ ಕಂಡಿರುವುದಾಗಿ ದೂರುದಾರ ಅನುಪ್‌ ಕುಮಾರ್‌ ಡೇ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಟ್ವೀಟ್‌ಗಳಿಂದಾಗಿ ಸಾರ್ವಜನಿಕರ ನೆಮ್ಮದಿಗೆ ಹಾನಿಯಾಗಲಿದೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಗುಂಪು ಮತ್ತೊಂದು ಸಮುದಾಯ ಮೇಲೆ ಯಾವುದೇ ದುಷ್ಕೃತ್ಯ ನಡೆಸುವ ಬಗ್ಗೆ ಉತ್ತೇಜಿಸುವಂತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಜಿಗ್ನೇಶ್ ಮೆವಾನಿ (@jigneshmevani80) ಅವರು ಮಾಡಿರುವ ಎರಡು ಟ್ವೀಟ್‌ಗಳನ್ನು ಟ್ವಿಟರ್‌ ಭಾರತದಲ್ಲಿ ತಡೆಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.