ಗುವಾಹಟಿ: ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ ನಡೆದ ಹಿಂಸಾಚಾರದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜ್ಯ ಪೊಲೀಸರು ಸಮನ್ಸ್ ಜಾರಿ ಮಾಡಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ನೋಟಿಸ್ ನೀಡಲಾಗುವುದು. ರಾಹುಲ್ ಖುದ್ದಾಗಿ ಹಾಜರಾಗಲು ಸೂಚಿಸಲಾಗುವುದು ಎಂದು ಅವರು ತಿಳಿಸಿದರು.
ಯಾರೇ ಆದರೂ ನಿಯಮ ಉಲ್ಲಂಘಿಸಿದಾಗ ನಿಸ್ಸಂಶಯವಾಗಿಯೂ ಸಮನ್ಸ್ ನೀಡಲಾಗುತ್ತದೆ. ರಾಹುಲ್ ಗಾಂಧಿ ಅವರಿಗೂ ಸಮನ್ಸ್ ನೀಡಲಾಗುವುದು. ಲೋಕಸಭೆ ಚುನಾವಣೆ ಬಳಿಕ ಅವರು ಇಲ್ಲಿ ಹಾಜರಾಗಬೇಕು ಎಂದು ಅವರು ಹೇಳಿದರು.
ಅಸ್ಸಾಂ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಮತ್ತು ಕಾಂಗ್ರೆಸ್ ಶಾಸಕ ಜಾಕೀರ್ ಹುಸೇನ್ ಸಿಕ್ದರ್ ಅವರಿಗೆ ಸಮನ್ಸ್ ನೀಡಿರುವುದು ಈ ಪ್ರಕ್ರಿಯೆಯ ಭಾಗವಾಗಿದೆ ಎಂದು ಅವರು ತಿಳಿಸಿದರು.
ಜನವರಿಯಲ್ಲಿ ನಡೆದ ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ನಗರದ ಪ್ರಮುಖ ರಸ್ತೆಗಳಲ್ಲಿ ನುಗ್ಗಲು ಯತ್ನಿಸಿದಾಗ ಸಂಘರ್ಷ ಉಂಟಾಗಿತ್ತು. ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಿಸಿರುವುದನ್ನು ಅಸ್ಸಾಂ ಸಿಎಂ ಉಲ್ಲೇಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.