ಗುವಾಹಟಿ: ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ (39 ಕ್ಷೇತ್ರಗಳಿಗೆ) ಮತದಾನ ನಡೆಯುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಹೆಜ್ಜೆ ಹಾಕಿದ್ದಾರೆ. ಇದರ ಪರಿಣಾಮ ಮತಗಟ್ಟೆಗಳ ಬಳಿ ಸರತಿ ಸಾಲು ಕಂಡು ಬಂದಿವೆ.
ಕೆಲ ಮತಗಟ್ಟೆಗಳಲ್ಲಿನ ವಿದ್ಯುನ್ಮಾನ ಯಂತ್ರಗಳಲ್ಲಿ ತೊಂದರೆ ಕಾಣಿಸಿದ ವರದಿಯಾಗಿತ್ತು. ಆದರೆ ಎಷ್ಟು ಮತಗಟ್ಟೆಗಳಲ್ಲಿ ಸಮಸ್ಯೆ ಎದುರಾಗಿತ್ತು ಎಂಬುದರ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಒಟ್ಟು 73,44,631 ಮತದಾರರ ಪೈಕಿ ಬೆಳಿಗ್ಗೆ 9 ಗಂಟೆಯವೇಳೆಗೆ ಶೇ 10.51ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಒಟ್ಟಾರೆ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತದಾನ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು ಸಂಜೆ 6 ರವರೆಗೆ ನಡೆಯಲಿದೆ. ಮತಗಟ್ಟೆಗಳ ಬಳಿ ಕೋವಿಡ್ 19ರ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ಜನರು ಮಾಸ್ಕ್‌ಗಳನ್ನು ಧರಿಸಿ, ವೈಯಕ್ತಿಕ ಅಂತರ ಕಾಯ್ದುಕೊಂಡಿದ್ದರು. ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಲಭ್ಯವಾಗುವಂತೆ ಮಾಡಲಾಗಿದೆ. ಜತೆಗೆ ದೇಹದ ತಾಪಮಾನ ಪರಿಶೀಲಿಸಲಾಗುತ್ತಿದೆ.
ಐವರು ಮಂತ್ರಿಗಳು ಮತ್ತು ಉಪ ಸಭಾಪತಿ ಸೇರಿದಂತೆ 345 ಅಭ್ಯರ್ಥಿಗಳ ಭವಿಷ್ಯವನ್ನು ಈ ಹಂತದ ಚುನಾವಣೆ ನಿರ್ಧರಿಸಲಿದೆ.
ಮತದಾನ ನಡೆಯುವ ಹಲವು ಕ್ಷೇತ್ರಗಳಲ್ಲಿ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಆದರೆ ಬೆಳಿಗ್ಗೆ ಮಳೆ ಇಲ್ಲ. ಹಾಗಾಗಿ ಆರಂಭಿಕ ಗಂಟೆಗಳಲ್ಲಿ ಗಮನಾರ್ಹ ಮತದಾನವನ್ನು ದಾಖಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.