ಗುವಾಹಟಿ: ಅಸ್ಸಾಂನಲ್ಲಿ 44 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಬಂಡುಕೋರರ ಸಂಘಟನೆ ‘ಉಲ್ಫಾ’ ಮಂಗಳವಾರ ಅಧಿಕೃತವಾಗಿ ವಿಸರ್ಜನೆಗೊಂಡಿದೆ. ಉಲ್ಫಾ ಮುಖಂಡರು ಈಚೆಗೆ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಅಸ್ಸಾಂ ಉತ್ರದ ದರ್ರಾಂಗ್ ಜಿಲ್ಲೆಯ ಚಾಮುವಾಪರದಲ್ಲಿ ನಡೆದಿದ್ದ ಸಂಘಟನೆಯ ಸಾಮಾನ್ಯ ಸಭೆಯಲ್ಲಿ ವಿಸರ್ಜಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಸಂಘಟನೆಯ ಸುಮಾರು 65 ಸದಸ್ಯರು ಭಾಗವಹಿಸಿದ್ದರು.
‘ಇಂದು ನಮಗೆ ಭಾವನಾತ್ಮಕ ಮತ್ತು ನೋವಿನ ದಿನ. 1979ರಲ್ಲಿ ನಿರ್ದಿಷ್ಟ ಉದ್ದೇಶದೊಂದಿಗೆ ಸ್ಥಾಪಿಸಿದ್ದ ಸಂಘಟನೆಯನ್ನು ಇಂದು ಉದ್ದೇಶ ಸಾಧನೆಯಾಗದೇ ವಿಸರ್ಜಿಸಲಾಗಿದೆ. ಶಸ್ತ್ರಸಜ್ಜಿತ ಹೋರಾಟದಲ್ಲಿ ನಾವು ಸೋತಿದ್ದೇವೆ. ಆದರೆ, ಸಾಮಾನ್ಯ ಸಭೆಯ ತೀರ್ಮಾನವನ್ನು ನಾನು ಒಪ್ಪಲೇಬೇಕಾಗಿದೆ‘ ಎಂದು ಸಂಘಟನೆಯ ಸ್ಥಾಪಕರಲ್ಲಿ ಒಬ್ಬರಾಗಿದ್ ಅನೂಪ್ ಚೆಟಿಯಾ ಅವರು ದೂರವಾಣಿ ಮೂಲಕ ಪ್ರತಿಕ್ರಿಯಿಸಿದರು.
ಉಲ್ಫಾ ನಾಯಕರು, ಪದಾಧಿಕಾರಿಗಳು ಅಸ್ಸಾಂನಲ್ಲಿ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯದಲ್ಲಿ ತೊಡಗುವರು. ಅಸ್ಸಾಂ ಜಾತಿಯಾ ವಿಕಾಸ ಮಂಚ್ ಹೆಸರಿನ ಸಂಘಟನೆ ಸ್ಥಾಪಿಸಲಿದ್ದು, ಬರುವ ದಿನಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವರು ಎಂದು ಚೆಟಿಯಾ ತಿಳಿಸಿದರು.
ಉಲ್ಫಾ 2010ರಲ್ಲಿ ಶಾಂತಿ ಮಾತುಕತೆ ಆರಂಭಿಸಿದ್ದು, 2011ರಲ್ಲಿ ಇಬ್ಭಾಗಗೊಂಡಿತ್ತು. ಪರೇಶ್ ಬರುವಾ ನೇತೃತ್ವದಲ್ಲಿ ಉಲ್ಫಾ–ಇಂಡಿಪೆಂಡೆಂಟ್ ಹೆಸರಿನ ಪ್ರತ್ಯೇಕ ಬಣ ರಚನೆಯಾಗಿತ್ತು.
ಈ ಬಣ ಈಗಲೂ ಶಾಂತಿ ಮಾತುಕತೆಯಿಂದ ಹೊರಗುಳಿದಿದೆ. ಸದ್ಯ, ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.