ಗುವಾಹಟಿ: 'ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. 2041ರ ವೇಳೆಗೆ ಅಸ್ಸಾಂನಲ್ಲಿ ಮುಸ್ಲಿಮರ ಸಂಖ್ಯೆಯೇ ಅಧಿಕವಾಗಿರಲಿದೆ' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಶುಕ್ರವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸ್ಲಿಮರ ಸಂಖ್ಯೆ ಪ್ರತಿ 10 ವರ್ಷಗಳಲ್ಲಿ ಶೇ 30ರಷ್ಟು ಹೆಚ್ಚುತ್ತಿದೆ. ಹೀಗಾಗಿ, 2041ರ ವೇಳೆಗೆ ರಾಜ್ಯದಲ್ಲಿ ಅವರ ಸಂಖ್ಯೆ ಅಧಿಕವಾಗಿರಲಿದೆ’ ಎಂದು ಹೇಳಿದರು.
‘ಸಂಖ್ಯಾಶಾಸ್ತ್ರೀಯ ಮಾದರಿಗಳ ಪ್ರಕಾರ, ಅಸ್ಸಾಂನ ಒಟ್ಟು ಜನಸಂಖ್ಯೆಯಲ್ಲಿ ಸದ್ಯ ಶೇ 40ರಷ್ಟು ಮುಸ್ಲಿಮರಿದ್ದಾರೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ 1.07 ಕೋಟಿ ಇತ್ತು. ಇದು ಒಟ್ಟು ಜನಸಂಖ್ಯೆ 3.12 ಕೋಟಿಯ ಶೇ 34.22 ರಷ್ಟಾಗುತ್ತದೆ. ಹಿಂದೂಗಳ ಸಂಖ್ಯೆ 1.92 ಕೋಟಿ ಇತ್ತು. ಇದು ಒಟ್ಟು ಜನಸಂಖ್ಯೆಯ ಶೇ 61.45ರಷ್ಟಾಗುತ್ತದೆ’ ಎಂದು ವಿವರಿಸಿದರು.
‘ಅಸ್ಸಾಂನಲ್ಲಿ ಪ್ರತಿ 10 ವರ್ಷಗಳಲ್ಲಿ ಮುಸ್ಲಿಮರ ಸಂಖ್ಯೆ 11 ಲಕ್ಷದಷ್ಟು ಹೆಚ್ಚುತ್ತದೆ. ಇದು ಹಿಮಂತ ಬಿಸ್ವ ಶರ್ಮ ನೀಡುತ್ತಿರುವ ದತ್ತಾಂಶವಲ್ಲ. ಇದು ಜನಗಣತಿಯಿಂದ ಗೊತ್ತಾಗಿರುವ ಅಂಶ. ಈ ಎಲ್ಲ ದತ್ತಾಂಶಗಳು ಪ್ರಕಟವಾಗಿವೆ’ ಎಂದು ಹೇಳಿದರು.
‘ಪ್ರತಿ 10 ವರ್ಷಗಳಲ್ಲಿ ಹಿಂದೂ ಸಮುದಾಯದ ಜನಸಂಖ್ಯೆ ಶೇ 16ರಷ್ಟು ಹೆಚ್ಚಳವಾಗುತ್ತಿದೆ’ ಎಂದರು.
ಹಲವು ಕ್ರಮ: ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಳವಾಗುವುದನ್ನು ತಡೆಯುವುದಕ್ಕಾಗಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಹಿಮಂತ ಹೇಳಿದರು.
‘ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ನಿಜುತ್ ಮೊಯಿನಾ’ ಯೋಜನೆ ಯಶಸ್ವಿಯಾದಲ್ಲಿ, ಬಾಲ್ಯವಿವಾಹ ಪದ್ಧತಿಗೆ ಕಡಿವಾಣ ಬೀಳಲಿದೆ. ಬಾಲಕಿಯರು ವೈದ್ಯರು, ಎಂಜಿನಿಯರ್‌ಗಳಾಗುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಈ ಸಮಸ್ಯೆ ದೊಡ್ಡದಾಗಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಈ ಯೋಜನೆಯು ಒಂದಿಷ್ಟು ಫಲ ನೀಡುವುದು’ ಎಂದರು.
‘ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷದ ಮಾತನ್ನು ಕೇಳುತ್ತದೆ. ಹೀಗಾಗಿ, ಆ ಸಮುದಾಯದ ಜನಸಂಖ್ಯೆ ಹೆಚ್ಚುವುದನ್ನು ತಡೆಯುವಲ್ಲಿ ಕಾಂಗ್ರೆಸ್ ಪಕ್ಷ ಮಹತ್ವದ ಪಾತ್ರ ವಹಿಸಬಹುದು. ಒಂದು ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜನಸಂಖ್ಯೆ ನಿಯಂತ್ರಣದ ಬ್ರ್ಯಾಂಡ್ ರಾಯಭಾರಿಯಾದರೆ, ಯೋಜನೆಯು ಬಹಳ ತ್ವರಿತವಾಗಿ ಫಲ ನೀಡುವುದು‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.