ನವದೆಹಲಿ: ಗುರುಗ್ರಾಮದಲ್ಲಿ ಇತ್ತೀಚೆಗೆ ಮುಸ್ಲಿಂಯುವಕನ ಮೇಲೆ ನಡೆದಿದ್ದ ಹಲ್ಲೆ ಮತ್ತು ಧರ್ಮ ನಿಂದನೆಯನ್ನು ಖಂಡಿಸಿರುವ ಪೂರ್ವ ದೆಹಲಿಯ ನೂತನ ಸಂಸದ, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್, ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ, ನಮ್ಮದು ಜಾತ್ಯತೀತ ರಾಷ್ಟ್ರವೆಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ನೈರುತ್ಯ ದೆಹಲಿಯ ಗುರುಗ್ರಾಮದಲ್ಲಿ ಕಳೆದ ವಾರ ಪ್ರಾರ್ಥನೆ ಮುಗಿಸಿ ಮನೆ ತೆರಳುತ್ತಿದ್ದ 25 ವರ್ಷದ ಮೊಹಮ್ಮದ್ ಬರ್ಕತ್ ಎಂಬ ಮುಸ್ಲಿಂ ಯುವಕನನ್ನು ತಡೆದಿದ್ದ ಕೆಲ ಹಿಂದೂ ಬಲ ಪಂಥೀಯ ಕಾರ್ಯಕರ್ತರು ಬಲವಂತವಾಗಿ ಆತನ ಟೋಪಿ ತೆಗೆಸಿದ್ದರು. ಅಲ್ಲದೆ, ‘ಜೈ ಶ್ರೀರಾಮ್’ ಎಂದು ಹೇಳುವಂತೆ ಒತ್ತಾಯಿಸಿದ್ದರು. ಜತೆಗೆ ಹಲ್ಲೆಯನ್ನೂ ನಡೆಸಿದ್ದರೆಂದು ವರದಿಯಾಗಿತ್ತು.
ಇದೇ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಗಂಭೀರ್, ‘ಗುರುಗ್ರಾಮದಲ್ಲಿ ಮುಸ್ಲಿಂ ಯುವಕನ ಮೇಲೆ ನಡೆದ ದಾಳಿ ಶೋಚನೀಯ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮದು ಜಾತ್ಯತೀತ ರಾಷ್ಟ್ರ. ಇಲ್ಲಿ, ಜಾವೇದ್ ಅಕ್ತರ್ ಅಂಥವರು ‘ಓ ಪಾಲನ್ ಹರೇ, ನಿರ್ಗುಣ ಔರ್ ನ್ಯಾಯ್‌ರೇ,’ ಎಂದು ಬರೆಯಲು ಸಾಧ್ಯವಾಗುತ್ತದೆ. ರಾಕೇಶ್ ಓಮ್ ಮೆಹ್ರಾ ಅಂಥವರು ‘ಆರ್ಜ್ಹಿಯಾ’ ಎಂದು ಬರೆಯಲು ಸಾಧ್ಯವಾಗಿದೆ,’ ಎಂದು ಅವರು ಬರೆದುಕೊಂಡಿದ್ದಾರೆ.
ಇದೇ ಘಟನೆಯನ್ನು ಖಂಡಿಸಿ ಹರಿಯಾಣ ಬಿಜೆಪಿಯು ಹೇಳಿಕೆಯನ್ನೂ ಬಿಡುಗಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.