ಭೋಪಾಲ್: ಮಧ್ಯ ಪ್ರದೇಶದಲ್ಲಿ 2008 ಮತ್ತು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್. ಚುನಾವಣೆ ಅವರ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.
ಆದರೆ, ಈ ಬಾರಿ ಮಧ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕಮಲನಾಥ್ ಅವರು ಚೌಹಾಣ್ ಅವರನ್ನು ಹಿಂದಿಕ್ಕಿದಂತೆ ಕಾಣಿಸುತ್ತಿದೆ. ಕಮಲನಾಥ್ ಅವರ ನಡೆಗಳು ಈ ಸಲ ಹೆಚ್ಚು ಚಾಣಾಕ್ಷತೆಯಿಂದ ಕೂಡಿವೆ. ಮೇ ತಿಂಗಳಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕಮಲನಾಥ್ ಅವರು ರಾಜಕೀಯ ಆಟದ ನಿಯಮಗಳನ್ನೇ ಬದಲಾಯಿಸಿದ್ದಾರೆ.
ಧಾರ್ಮಿಕ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಹೋಗುವಂತೆ ಅವರು ನೋಡಿಕೊಂಡಿದ್ದಾರೆ. ಬಿಜೆಪಿಯ ನೆಚ್ಚಿನ ಶ್ರೀರಾಮ ಮತ್ತು ಗೋವನ್ನೇ ಕಮಲನಾಥ್ ಚುನಾವಣೆಗೆ ಬಹಳ ಮೊದಲಿನಿಂದಲೇ ಗಟ್ಟಿಯಾಗಿ ಹಿಡಿದುಕೊಂಡುಬಿಟ್ಟಿದ್ದಾರೆ. ‘ದಿನಕ್ಕೊಂದು ಪ್ರಶ್ನೆ’ ಸರಣಿಯನ್ನು ಆರಂಭಿಸುವ ಮೂಲಕವೂ ಬಿಜೆಪಿ ಉತ್ತರ ಹೇಳಬೇಕಾದ ಅನಿವಾರ್ಯತೆಯನ್ನೂ ಅವರು ಸೃಷ್ಟಿಸಿದರು. ಆದರೆ, ಕೇಂದ್ರ ಸರ್ಕಾರದ ಆಡಳಿತದ ವೈಫಲ್ಯಗಳ ಬಗ್ಗೆ ದತ್ತಾಂಶಗಳ ಆಧಾರದಲ್ಲಿ ಕಮಲನಾಥ್ ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ.
ಕಾಂಗ್ರೆಸ್‌ನ ಹಲವು ಮುಖಂಡರನ್ನು ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಸೆಳೆದುಕೊಂಡಿತ್ತು. ಈ ಬಾರಿ ಅದಕ್ಕೆ ಕಮಲನಾಥ್ ಸೇಡು ತೀರಿಸಿಕೊಂಡಿದ್ದಾರೆ. ಬಿಜೆಪಿಯ ಹತ್ತಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಪ್ರತಿಸ್ಪರ್ಧಿಯನ್ನು ದುರ್ಬಲಗೊಳಿಸುವ ಯಾವ ಅವಕಾಶವನ್ನೂ ಕಮಲನಾಥ್ ಕಳೆದುಕೊಂಡಿಲ್ಲ. ಶಿವರಾಜ್ ಅವರ ಭಾವ ಸಂಜಯ್ ಸಿಂಗ್ ಮಸಾನಿ ಕಾಂಗ್ರೆಸ್ ಸೇರಿದ್ದಂತೂ ಬಿಜೆಪಿಗೆ ದೊಡ್ಡ ಹೊಡೆತ. ಮಧ್ಯ ಪ್ರದೇಶದ ಭವಿಷ್ಯದ ನಾಯಕ ಕಮಲನಾಥ್ ಅವರೇ ಹೊರತು ಶಿವರಾಜ್ ಸಿಂಗ್ ಅಲ್ಲ ಎನ್ನುವ ಮೂಲಕ ಮಸಾನಿ ಬಹುದೊಡ್ಡ ಸಂದೇಶ ರವಾನಿಸಿದ್ದಾರೆ.
**
ಮಧ್ಯಪ್ರದೇಶ: ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆ
ಭೋಪಾಲ್: ನವೆಂಬರ್ 28ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 155 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಮೂವರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ.
ಬಿಜೆಪಿ ಬಿಟ್ಟುಕಾಂಗ್ರೆಸ್ ಸೇರಿರುವ ಸಂಜಯ ಶರ್ಮಾ, ಪದ್ಮಾ ಶುಕ್ಲಾ ಮತ್ತು ಅಭಯ ಮಿಶ್ರಾ ಹಾಗೂ ನಾಲ್ವರು ಮಾಜಿ ಸಂಸದರಿಗೂ ಟಿಕೆಟ್ ನೀಡಲಾಗಿದೆ.
230 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ, ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿರುವ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲನಾಥ್ ಹಾಗೂ ಪ್ರಚಾರ ಸಮಿತಿ ಉಸ್ತುವಾರಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲ. 21 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹಾಗೂ 24 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಸಿಂಧಿಯಾ ಹಾಗೂ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ಬೆಂಬಲಿಗರಿಗೆ ಸಮನಾಗಿ ಟಿಕೆಟ್ ನೀಡಲಾಗಿದೆ. ಮೂವರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. 46 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಬುಡಕಟ್ಟು ಸಮುದಾಯದ ಧ್ವನಿಯಾಗಿರುವ ಜಯ ಆದಿವಾಸಿ ಯುವ ಶಕ್ತಿ (ಜೆಎವೈಎಸ್) ಸಂಚಾಲಕ ಡಾ. ಹೀರಾಲಾಲ್ ಅಲಾವಾ ಅವರಿಗೆ ಧಾರ್ ಜಿಲ್ಲೆಯ ಮನವಾರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.ಬಿಜೆಪಿ ಈಗಾಗಲೇ 177 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
**
ಅಧಿಕಾರಿಗಳಿಂದ ಪ್ರಚಾರ: ಆಯೋಗ ಗರಂ
ಹೈದರಾಬಾದ್: ಉಸ್ತುವಾರಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪರ ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿರುವ ಬಗ್ಗೆ ದೂರುಗಳು ಬಂದಿವೆ. ಇಂಥವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಚುನಾವಣಾಧಿಕಾರಿಗಳು ತೆಲಂಗಾಣ ಸರ್ಕಾರಕ್ಕೆ ಸೂಚಿಸಿದ್ದಾರೆ.
ರಾಜ್ಯದ ಪ್ರಧಾನ ಕಾರ್ಯದರ್ಶಿಗೆ (ಸಾಮಾನ್ಯ ಆಡಳಿತ) ಹೆಚ್ಚುವರಿ ಚುನಾವಣಾಧಿಕಾರಿ ವಿ.ಸೈದಾ ಅವರು ಅಕ್ಟೋಬರ್ 31ರಂದು ಈ ಕುರಿತು ಪತ್ರ ಬರೆದಿದ್ದಾರೆ.
ಅಕ್ಟೋಬರ್ 27 ರಂದು ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಈ ಕುರಿತು ಪ್ರಶ್ನಿಸಿದ್ದರು. ವಾಟ್ಸ್‌ಆ್ಯಪ್‌ನಲ್ಲಿ ಪ್ರಚಾರ ನಡೆಸಿರುವುದು ಗೊತ್ತಾಗಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಇಂಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
**
ಮಸಾನಿ ಮನಸು ಬದಲೇಕೆ?
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾವ ಸಂಜಯ ಸಿಂಗ್ ಮಸಾನಿ ಅವರು ಕಾಂಗ್ರೆಸ್ ಸೇರಿರುವುದರ ಹಿಂದಿನ ಕಾರಣ ಏನು ಎಂಬುದು ರಾಜಕೀಯ ವಿಶ್ಲೇಷಕರ ತಲೆ ತಿನ್ನುತ್ತಿರುವ ಪ್ರಶ್ನೆ.
ಕಳೆದ 14 ವರ್ಷಗಳಿಂದ ಶಿವರಾಜ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈ ಅವಧಿಯಲ್ಲಿ ಅವರ ಸಂಪುಟದ ಅತ್ಯಂತ ಪ್ರಭಾವಿ ಸಚಿವರಿಗಿಂತ ಹೆಚ್ಚು ಹಿಡಿತವನ್ನು ಆಡಳಿತದ ಮೇಲೆ ಮಸಾನಿ ಹೊಂದಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ಅವರು ಬಿಜೆಪಿ ತೊರೆದಿದ್ದಾರೆ ಎಂಬುದನ್ನು ನಂಬುವುದು ಕಷ್ಟ. ಮಸಾನಿ ಅವರು ಟಿಕೆಟ್ ಕೇಳಿದ್ದ ಬಾರಾ ಸೋನಿ ಕ್ಷೇತ್ರದಿಂದ ಹಾಲಿ ಶಾಸಕ ಯೋಗೇಂದ್ರ ನಿರ್ಮಲ್ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
2008 ಮತ್ತು 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮಸಾನಿ ಅವರು ಟಿಕೆಟ್‌ಗೆ ಪ್ರಯತ್ನಿಸಿದ್ದರು. ಆಗ ಶಿವರಾಜ್ ಅವರು ಪಕ್ಷದಲ್ಲಿ ಈಗಿನದ್ದಕ್ಕಿಂತ ಬಹಳ ಹೆಚ್ಚು ಪ್ರಬಲರಾಗಿದ್ದರು. ಆ ಎರಡೂ ಬಾರಿಯೂ ಮಸಾನಿಗೆ ಟಿಕೆಟ್ ಸಿಕ್ಕಿರಲಿಲ್ಲ. ಆಗ ಅವರು ಪಕ್ಷದ ವಿರುದ್ಧ ಗೊಣಗಿದ್ದೂ ಇಲ್ಲ.
ಇಷ್ಟೆಲ್ಲ ವರ್ಷಗಳಲ್ಲಿ ಅಧಿಕಾರದ ಮೊಗಸಾಲೆಯಲ್ಲಿ ಗಟ್ಟಿ ಕುಳಿತಿದ್ದ ಮಸಾನಿ ಯಾವುದೇ ರೀತಿಯ ಸಮಸ್ಯೆಗಳ ಸಂದರ್ಭದಲ್ಲಿ ಸಂಧಾನಕಾರನಾಗಿ ಮಿಂಚಿದ್ದರು. ನೀಲಾಕ್ಷಿ ಇನ್‌ಫ್ರಾಸ್ಟ್ರಕ್ಚರ್ಸ್ ಎಂಬ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ ಮಾಲೀಕರಾಗಿರುವ ಅವರು ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹಲವು ಯೋಜನೆಗಳನ್ನು ಹೊಂದಿದ್ದಾರೆ.
ಬಾಲಿವುಡ್‌ನಲ್ಲಿಯೂ ಭಾರಿ ಹಣ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಒಂದೆರಡು ಸಿನಿಮಾಗಳಲ್ಲಿಯೂ ಅವರು ಮುಖ ತೋರಿಸಿದ್ದಾರೆ. ಮಸಾನಿಯವರಿಗೆ ಮಧ್ಯ ಪ್ರದೇಶ ಸರ್ಕಾರ ನೀಡಿದ್ದ ಪತ್ರಕರ್ತರ ಮಾನ್ಯತಾ ಪತ್ರವೊಂದು ಕೆಲ ವರ್ಷಗಳ ಹಿಂದೆ ‘ಮದ್ಯದ ದೊರೆ’ಯೊಬ್ಬರ ಮನೆಯಲ್ಲಿ ನಡೆದ ಶೋಧದ ವೇಳೆ ಪತ್ತೆಯಾಗಿತ್ತು.
ಶಿವರಾಜ್ ಅವರ ಹೆಂಡತಿ, ತಮ್ಮ ಸಹೋದರಿ ಸಾಧನಾ ಸಿಂಗ್ ಅವರ ಜತೆ ಸೇರಿಕೊಂಡು ಮಧ್ಯಪ್ರದೇಶದಲ್ಲಿ ಹಲವು ಮೂಲಸೌಕರ್ಯ ಯೋಜನೆಗಳನ್ನು ಮಸಾನಿ ಅವರ ಕಂಪನಿ ಬಗಲಿಗೆ ಹಾಕಿಕೊಂಡಿದೆ ಎಂದು ಕಾಂಗ್ರೆಸ್ ಪಕ್ಷವು ಹಲವು ಬಾರಿ ಆರೋಪ ಮಾಡಿತ್ತು. ವ್ಯಾಪಂ ಹಗರಣದಲ್ಲಿಯೂ ಮಸಾನಿ ಅವರ ಹೆಸರು ಕೇಳಿ ಬಂದದ್ದಿದೆ.
ಚಾಣಾಕ್ಷ ಮಸಾನಿಗೆ ಮಧ್ಯಪ್ರದೇಶದಲ್ಲಿ ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದು ಅರಿವಾಗಿದೆ. ಹಾಗಾಗಿಯೇ ಅವರು ನಿಷ್ಠೆ ಬದಲಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
**
ಒವೈಸಿ ಕ್ಷೇತ್ರದಲ್ಲಿ ಬಿಜೆಪಿಯ‘ಹೊಸ ಮುಖ’
ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರ ಸಹೋದರ ಅಕ್ಬರುದ್ದೀನ್ ಒವೈಸಿ ಅವರು ಪ್ರತಿನಿಧಿಸುತ್ತಿರುವ ಹಳೆ ಹೈದರಾಬಾದ್‌ನ ಚಂದ್ರಯಾನಗುಟ್ಟ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ‘ಹೊಸ ಮುಖ’ ಸಯ್ಯದ್ ಶಹೆಜಾದಿ ಅವರನ್ನು ಕಣಕ್ಕಿಳಿಸಿದೆ.
ಈ ಮುಸ್ಲಿಂ ಯುವತಿ ವಿದ್ಯಾರ್ಥಿ ದೆಸೆಯಿಂದಲೇ ಬಿಜೆಪಿ ಜತೆ ಗುರುತಿಸಿಕೊಂಡವರು. ಉತ್ತರ ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದವರು.
ಶಹೆಜಾದಿ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಹಳೆಯ ಹೈದರಾಬಾದ್ ಪ್ರದೇಶದ ಜನಜೀವನದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ವಿಶೇಷವಾಗಿ ಚಂದ್ರಯಾನಗುಟ್ಟ ಕ್ಷೇತ್ರದಲ್ಲಂತೂ ಏನೂ ಆಗಿಲ್ಲ. ಹಾಗಾಗಿ, ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಟಿಕೆಟ್ ಘೋಷಣೆಯಾದ ಬಳಿಕ ಶೆಹಜಾದಿ ಹೇಳಿದ್ದಾರೆ.
ಚಂದ್ರಯಾನಗುಟ್ಟ ಕ್ಷೇತ್ರ ಎಐಎಂಐಎಂನ ಭದ್ರಕೋಟೆ. ಕೋಮು ವಿಚಾರದಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ಕ್ಷೇತ್ರ. ಎಐಎಂಐಎಂ ಮುಖಂಡರು ಕೋಮು ಭಾವನೆ ಕೆರಳಿಸುತ್ತಾರೆ, ಜನರಲ್ಲಿ ಮೂಲಭೂತವಾದ ಬಿತ್ತುತ್ತಾರೆ ಎಂಬುದು ಶೆಹಜಾದಿ ಆರೋಪ. ಆದರೆ, ಕೋಮು ಕಾರ್ಯಸೂಚಿಯನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಸ್ಥಾಪಿತ ಹಿತಾಸಕ್ತಿಗಳು ಮಾತ್ರ ಬಿಜೆಪಿಯನ್ನು ಕೋಮುವಾದಿಪಕ್ಷ ಎನ್ನುತ್ತವೆ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಎಂಬುದರತ್ತ ಅವರು ಗಮನ ಸೆಳೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.