ಬರ್ನಾಲಾ (ಪಂಜಾಬ್): ಜಿಲ್ಲೆಯ ಭದೌರ್ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಫೆಬ್ರುವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.
ಈ ಹಿನ್ನೆಲೆಯಲ್ಲಿ ಪಕ್ಷದಿಂದ ಕಣಕ್ಕಿಳಿಯಲಿರುವ ಎಂಟು ಅಭ್ಯರ್ಥಿಗಳನ್ನೊಳಗೊಂಡ ಮೂರನೇ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದ ಕಾಂಗ್ರೆಸ್, ಮುಖ್ಯಮಂತ್ರಿ ಚನ್ನಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿತ್ತು.
ಚನ್ನಿ ಅವರು ಸದ್ಯ ಶಾಸಕರಾಗಿರುವ ಮತ್ತು 2007ರಿಂದಲೂ ಪ್ರತಿನಿಧಿಸುತ್ತಿರುವ ಚಮ್‌ಕೌರ್ ಸಾಹಿಬ್ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಈ ಮೊದಲು ಘೋಷಿಸಿತ್ತು.
ಇದನ್ನೂ ಓದಿ:ಪಂಜಾಬ್: ಎರಡು ಕ್ಷೇತ್ರಗಳಿಂದ ಚನ್ನಿ ಸ್ಪರ್ಧೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ,ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸುವಂತೆ ಸಿಎಂ ಚನ್ನಿ ಮತ್ತು ಸಿಎಂ ಸ್ಥಾನದ ಆಕಾಂಕ್ಷಿ ನವಜೋತ್ ಸಿಂಗ್ ಸಿಧು ಅವರು ಒತ್ತಾಯಿಸಿದ್ದರು. ಆದರೆ,ಆ ನಿರ್ಧಾರವನ್ನು ಕಾರ್ಯಕರ್ತರು ಕೈಗೊಳ್ಳಲಿದ್ದಾರೆ ಎಂದು ರಾಹುಲ್ ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.