ADVERTISEMENT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ರಾಜ್ಯ ಬಿಜೆಪಿ ನಾಯಕರೊಂದಿಗೆ ಕೇಂದ್ರ ಸಚಿವರ ಸಭೆ

ಪಿಟಿಐ
Published 29 ಜೂನ್ 2024, 12:43 IST
Last Updated 29 ಜೂನ್ 2024, 12:43 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವರ್ಷಾಂತ್ಯದಲ್ಲಿ ನಡೆಯಲಿದ್ದು, ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್‌ ಹಾಗೂ ಅಶ್ವಿನಿ ವೈಷ್ಣವ್‌ ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಿ ಶನಿವಾರ ಮಾತುಕತೆ ನಡೆಸಿದ್ದಾರೆ. 

ರಾಜ್ಯ ಚುನಾವಣಾ ಉಸ್ತುವಾರಿ ಮತ್ತು ಸಹ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಯಾದವ್‌ ಹಾಗೂ ವೈಷ್ಣವ್‌ ನಡೆಸಿದ ಮೊದಲ ಸಭೆಯಲ್ಲಿ, ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್‌ ಬವಾಂಕುಲೆ, ಮುಂಬೈ ಬಿಜೆಪಿ ಅಧ್ಯಕ್ಷ ಆಶಿಷ್‌ ಶೆಲಾರ್‌ ಹಾಗೂ 30ಕ್ಕೂ ಹೆಚ್ಚು ರಾಜ್ಯ ನಾಯಕರು ಭಾಗಿಯಾಗಿದ್ದರು.

ADVERTISEMENT

ಸಭೆ ಬಳಿಕ ಮಾತನಾಡಿದ ಶೆಲಾರ್, 'ವಿಧಾನಸಭೆ ಚುನಾವಣೆ ಗೆಲ್ಲಲು ನಕ್ಷೆ ತಯಾರಿಸಲಾಗಿದೆ' ಎಂದು ತಿಳಿಸಿದ್ದಾರೆ.

'ಮೈತ್ರಿ ಸರ್ಕಾರದ ಬಜೆಟ್‌ ಅನ್ನು ರಾಜ್ಯದ ಜನರು ಮೆಚ್ಚಿದ್ದಾರೆ. ನಾವು, ನಮ್ಮ ಮಿತ್ರ ಪಕ್ಷಗಳೊಂದಿಗೆ ಸೇರಿ ವಿಧಾನಸಭೆ ಚುನಾವಣೆ ಗೆಲ್ಲಲಿದ್ದೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ಶುಕ್ರವಾರ ರಾಜ್ಯ ಬಜೆಟ್‌ ಮಂಡಿಸಿದ್ದಾರೆ. ಮಹಿಳೆಯರು, ರೈತರು ಹಾಗೂ ಯುವಜನರ ವಿಚಾರಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

ಮಹಾರಾಷ್ಟ್ರ ವಿಧಾನಸಭೆಯು 288 ಸದಸ್ಯ ಬಲವನ್ನು ಹೊಂದಿದೆ.

ಬಿಜೆಪಿ, ಶಿವಸೇನಾ ಹಾಗೂ ಎನ್‌ಸಿಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟವು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಹಿನ್ನಡೆ ಅನುಭವಿಸಿದೆ. ಇಲ್ಲಿನ 48 ಸ್ಥಾನಗಳ ಪೈಕಿ ಮೈತ್ರಿಕೂಟ ಕೇವಲ 17ರಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ 9ರಲ್ಲಿ ಬಿಜೆಪಿ, 7 ಕಡೆ ಶಿವಸೇನಾ ಹಾಗೂ ಒಂದು ಕ್ಷೇತ್ರದಲ್ಲಿ ಎನ್‌ಸಿಪಿ ಜಯ ಸಾಧಿಸಿತ್ತು.

ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಆಘಾಡಿ 30 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 13 ಸ್ಥಾನ ಜಯಿಸಿದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ 9, ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ 8 ಕಡೆ ಗೆಲುವು ಕಂಡಿದೆ. ಉಳಿದೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು. ಇದು, 'ಮಹಾಯುತಿ' ಮೈತ್ರಿಕೂಟವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.