ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಹುಮತ ಕುರಿತು ಇಂದು (ಗುರುವಾರ)ಸಂಜೆ ವೇಳೆ ಸ್ಪಷ್ಟ ಚಿತ್ರಣ ಸಿಗಲಿದೆ.
ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್‌ನ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಮತ್ತು ಸಮಾಜವಾದಿ ಪಕ್ಷವು (ಎಸ್‌ಪಿ) 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಒಟ್ಟು ಮತಗಳ ಹಂಚಿಕೆಯಲ್ಲಿ ಬಿಜೆಪಿ ಶೇ 38.9ರಷ್ಟು ಮೇಲುಗೈ ಸಾಧಿಸುತ್ತಿದೆ.
ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರುವರಿ 10ರಿಂದ ಮಾರ್ಚ್ 7 ರವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಬಹುಮತ ಸಾಬೀತು ಮಾಡಲು ಬೇಕಿರುವ ಸಂಖ್ಯೆ 202 ಆಗಿದೆ.
ಪಂಜಾಬ್‌ನಲ್ಲಿ 39 ಸ್ಥಾನಗಳಲ್ಲಿ ಮುನ್ನಡೆ ಗಳಿಸಿರುವ ಎಎಪಿ, ಶೇ 40.3ರಷ್ಟು ಮತಗಳನ್ನು ಪಡೆದಿದೆ. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ತಲಾ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿ ತಲಾ 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗೋವಾದಲ್ಲಿ ಬಿಜೆಪಿ 7 ಸ್ಥಾನಗಳಮುನ್ನಡೆಯೊಂದಿಗೆ ಶೇ 39ರಷ್ಟು ಮತಗಳನ್ನು ಪಡೆದಿದೆ. ಕಾಂಗ್ರೆಸ್ ಶೇ 24.6ರಷ್ಟು ಮತಗಳೊಂದಿಗೆ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ತಿಳಿದುಬಂದಿದೆ.
ಮಣಿಪುರದಲ್ಲಿ ಆರಂಭಿಕ ಹಂತದಲ್ಲಿ ಬಿಜೆಪಿ ಶೇ 59.9ರಷ್ಟು ಮತಗಳ ಹಂಚಿಕೆಯೊಂದಿಗೆ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಶೇ 29.1ರಷ್ಟು ಮತಗಳೊಂದಿಗೆ 1 ಸ್ಥಾನದಲ್ಲಿ ಮುನ್ನಡೆ ಗಳಿಸಿದೆ.
ಉತ್ತರಾಖಂಡದಲ್ಲಿ ಬಿಜೆಪಿ ಶೇ 44ರಷ್ಟು ಮತ ಹಂಚಿಕೆಯೊಂದಿಗೆ 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.