ರಾಜಸ್ಥಾನದ ಮತದಾರರು ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಪರಂಪರೆ ಮುಂದುವರಿಸಿದ್ದಾರೆ ಎಂದು ಹೇಳುವಷ್ಟು ಈ ಬಾರಿಯ ಫಲಿತಾಂಶ ಸರಳವಾಗಿಲ್ಲ. ರಾಜಸ್ಥಾನದಲ್ಲಿನ ಜಾತಿ ರಾಜಕಾರಣದ ಸಮೀಕರಣ ಈ ಬಾರಿ ಗಣನೀಯ ಎನ್ನುವಷ್ಟರಮಟ್ಟಿಗೆ ಬದಲಾಗಿದೆ. ರಾಜಸ್ಥಾನದ ಚುನಾವಣಾ ರಾಜಕಾರಣಕ್ಕೆ ಹೊಸದಿಕ್ಕನ್ನು ತೋರಿಸಿದೆ
ಬೆಂಗಳೂರು: ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರವನ್ನು ಬದಲಿಸುವ ಪರಂಪರೆಯನ್ನು ರಾಜಸ್ಥಾನ ಮುಂದುವರಿಸಿದೆ. 2018ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದೆ.
ರಾಜಸ್ಥಾನದ ಮೆವಾಡ, ದಹೋತಿ, ಧೂಂದರ್ ಪ್ರಾಂತಗಳು ಬಿಜೆಪಿಯ ಭದ್ರಕೋಟೆ. ಮೂವತ್ತು ವರ್ಷಗಳಲ್ಲಿ ಬಿಜೆಪಿ ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಲೇ ಬಂದಿದ್ದರೂ, ಕೆಲವು ಸ್ಥಾನಗಳು ಕಾಂಗ್ರೆಸ್‌ನತ್ತ ಹೊರಳಿದಾಗಲೆಲ್ಲಾ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. 2018ರಲ್ಲಿ ಇಲ್ಲಿ ಬಿಜೆಪಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡು, 35 ಕ್ಷೇತ್ರಗಳನ್ನಷ್ಟೇ ಗೆದ್ದುಕೊಂಡಿತ್ತು. ಜತೆಗೆ ಅಧಿಕಾರವನ್ನೂ ಕಳೆದುಕೊಂಡಿತ್ತು. ಈ ಪ್ರಾಂತಗಳಲ್ಲಿ 90ಕ್ಕೂ ಹೆಚ್ಚು ಕ್ಷೇತ್ರಗಳಿದ್ದು, ಇಲ್ಲಿ ಹೆಚ್ಚು ಸ್ಥಾನ ಗೆದ್ದವರು ರಾಜಸ್ಥಾನದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಮಾತಿದೆ. ಹೀಗಾಗಿ ಈ ಬಾರಿ ಬಿಜೆಪಿಯ ರಾಜ್ಯ ಮುಖಂಡರು ಮತ್ತು ಕೇಂದ್ರದ ನಾಯಕರು ಈ ಪ್ರಾಂತಗಳಲ್ಲಿಯೇ ಪ್ರಚಾರಕ್ಕೆ ಒತ್ತು ನೀಡಿದ್ದರು. ಈ ಪ್ರಾಂತಗಳಲ್ಲಿನ ಒಟ್ಟು ಕ್ಷೇತ್ರಗಳಲ್ಲಿ ಬಿಜೆಪಿ 66 ಕ್ಷೇತ್ರಗಳನ್ನು ಗೆದ್ದುಕೊಂಡು ಅಧಿಕಾರ ಖಚಿತಪಡಿಸಿಕೊಂಡಿತು.
ರಾಜಸ್ಥಾನದ ಮಾರ್ವಾಡ ಪ್ರಾಂತವು ಪ್ರತಿ ಚುನಾವಣೆಯಲ್ಲೂ ಮಗ್ಗುಲು ಬದಲಿಸುತ್ತದೆ. 2018ರ ಚುನಾವಣೆಯಲ್ಲಿ ಈ ಪ್ರಾಂತದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಮೇಲುಗೈ ಸಾಧಿಸಿತ್ತು. ಈ ಪ್ರಾಂತದ 20 ಕ್ಷೇತ್ರಗಳ ಮತದಾರರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಿ, ಗೆಲುವಿನ ದಡ ಸೇರಿಸಿದ್ದಾರೆ.
ರಾಜಸ್ಥಾನ ವಿಧಾನಸಭೆಗೆ ಚುನಾವಣೆ ಘೋಷಣೆಯಾದಾಗ, ಈ ಬಾರಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಬಹುದು ಎಂಬ ಅಭಿಪ್ರಾಯವಿತ್ತು. ಕಾಂಗ್ರೆಸ್ ಸರ್ಕಾರದ ಕೆಲವು ಕಲ್ಯಾಣ ಯೋಜನೆಗಳು ಜನಪ್ರಿಯತೆ ಪಡೆದಿದ್ದವು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂದು ಕೆಲ ಪ್ರಾಂತದ ಮತದಾರರು ಭಾವಿಸಿದ್ದರು ಮತ್ತು ಕೆಲ ಪ್ರಾಂತದ ಮತದಾರರು ಬಯಸಿದ್ದರು. ಇದು ಹಲವು ಪ್ರಾಂತಗಳಲ್ಲಿ ಕಾಂಗ್ರೆಸ್‌ಗೆ ಕೆಲವು ಸ್ಥಾನಗಳನ್ನು ಉಳಿಸಿಕೊಟ್ಟಿದೆ.
ಸರ್ಕಾರ ಬದಲಿಸುವ ಪರಂಪರೆಗೆ ವಿರುದ್ಧವಾಗಿ ಮತದಾನ ಮಾಡಿದ್ದು ಶೆಖಾವತಿ, ಹನುಮಾನ್‌ಗಡ್ ಮತ್ತು ಅಲ್ವರ್ ಪ್ರಾಂತದ ಮತದಾರರು. 2018ರಲ್ಲಿ ಈ ಮತದಾರರು ಕಾಂಗ್ರೆಸ್‌ಗೆ ಮತ ನೀಡಿದ್ದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಈ ಪ್ರಾಂತಗಳ ಮತದಾರರು ಈ ಬಾರಿಯೂ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ಬಹುತೇಕ ಸ್ಥಾನಗಳನ್ನು ಗೆದ್ದುಕೊಂಡಿದೆ.
ರಾಜಸ್ಥಾನದಲ್ಲಿ ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್ ಮತ್ತು ಬಿಜೆಪಿಯ ರಾಜ್ಯ ನಾಯಕರು, ‘ಇಲ್ಲಿ ಸ್ಪರ್ಧೆ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮಾತ್ರ. ಬೇರೆ ಪಕ್ಷಗಳಿಗೆ ಅವಕಾಶವಿಲ್ಲ’ ಎಂದು ಘೋಷಿಸಿದ್ದರು. ಆದರೆ ಈ ಬಾರಿಯ ಮತದಾನದ ಸ್ವರೂಪ ಮತ್ತು ಫಲಿತಾಂಶ ಇಂತಹ ಮಾತನ್ನು ನಿವಾಳಿಸಿ ಎಸೆದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಮತದಾರರನ್ನೇ ನೆಚ್ಚಿಕೊಂಡು ಬಿಎಸ್‌ಪಿ, ಆಜಾದ್ ಸಮಾಜ್ ಪಾರ್ಟಿ (ಎಎಸ್‌ಪಿ), ಸಿಪಿಎಂ, ಆರ್‌ಎಲ್‌ಪಿ, ಭಾರತೀಯ ಆದಿವಾಸಿ ಪಕ್ಷಗಳೂ (ಬಿಎಪಿ) ಚುನಾವಣಾ ಕಣಕ್ಕೆ ಇಳಿದಿದ್ದವು. ಈ ಪಕ್ಷಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಕಡೆಗಣಿಸಿದ್ದವು. ಆದರೆ, ಈ ಪಕ್ಷಗಳು ತೀವ್ರ ಹೊಡೆತ ನೀಡಿದ್ದು ಕಾಂಗ್ರೆಸ್‌ಗೆ. ಈ ಪಕ್ಷಗಳು ಒಟ್ಟು ಏಳು ಕ್ಷೇತ್ರಗಳನ್ನು ಗೆದ್ದುಕೊಂಡಿವೆ ಮತ್ತು 32 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಗೆಲುವಿಗೆ ಮುಳುವಾಗಿವೆ.
ಇದೇ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದ ಬಿಎಪಿ ಮೂರು ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಜತೆಗೆ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಸೋಲಿಗೆ ಕಾರಣವಾಗಿದೆ. ಆ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿನ ಸರಾಸರಿ ಅಂತರ 8 ಸಾವಿರ ಮತಗಳಷ್ಟು ಇದೆ. ಅಲ್ಲಿ ಬಿಎಪಿ ಅಭ್ಯರ್ಥಿಗಳು ಪಡೆದ ಸರಾಸರಿ ಮತ 37 ಸಾವಿರದಷ್ಟಿದೆ. ಆರ್‌ಎಲ್‌ಪಿ 1 ಕ್ಷೇತ್ರವನ್ನಷ್ಟೇ ಗೆದ್ದುಕೊಂಡಿದ್ದರೂ, 13 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಸೋಲಿಗೆ ಇದೇ ರೀತಿ ಕಾರಣವಾಗಿದೆ. ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿನ ಸರಾಸರಿ ಅಂತರಕ್ಕಿಂತ ಹಲವು ಪಟ್ಟು ಹೆಚ್ಚು ಮತಗಳನ್ನು ಆರ್‌ಎಲ್‌ಪಿ ಅಭ್ಯರ್ಥಿಗಳು ಗಳಿಸಿದ್ದಾರೆ. ಪರಿಣಾಮವಾಗಿ ಈ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಸುಲಭವಾಗಿದೆ.
ಉತ್ತರ ಪ್ರದೇಶದ ಜತೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಬಿಎಸ್‌ಪಿ, ಎಎಸ್‌ಪಿ ಮತ್ತು ಸಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಇದರಲ್ಲಿ ಬಿಎಸ್‌ಪಿ ಮತ್ತು ಎಸ್‌ಎಪಿ ಮೂರು ಕ್ಷೇತ್ರಗಳಲ್ಲಿ ಗೆದ್ದುಕೊಂಡಿವೆ. ಆದರೆ ಸಿಪಿಐ ಸೇರಿ ಮೂರು ಪಕ್ಷಗಳು ಒಟ್ಟು 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತೀವ್ರ ಹೊಡೆತ ನೀಡಿವೆ. ಇನ್ನು ಟಿಕೆಟ್ ಸಿಗದೆ ಕಾಂಗ್ರೆಸ್‌ನಿಂದ ಹೊರಬಂದು ಕಣಕ್ಕೆ ಪಕ್ಷೇತರ ಅಭ್ಯರ್ಥಿಗಳಾಗಿ ಇಳಿದಿದ್ದ 13 ಜನರು, ಕಾಂಗ್ರೆಸ್‌ನ ಅಭ್ಯರ್ಥಿಗಳ ಮತಗಳನ್ನು ಕಸಿದುಕೊಂಡಿದ್ದಾರೆ. ಈ ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹಲವು ಪಟ್ಟು ಹೆಚ್ಚು ಮತಗಳನ್ನು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಪಡೆದಿದ್ದಾರೆ.
ಸಣ್ಣ ಪ್ರಾದೇಶಿಕ ಪಕ್ಷಗಳು ಈ ಚುನಾವಣೆಯಲ್ಲಿ ಪಡೆದ ಮತಗಳು ಮತ್ತು ಗೆದ್ದ ಸ್ಥಾನಗಳು ಮುಂದಿನ ಚುನಾವಣೆಗಳಲ್ಲಿ ಅವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿವೆ. ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಮ್ಮ ತಂತ್ರಗಳನ್ನು ಬದಲಿಸಲೇಬೇಕಾದಂತಹ ಅನಿವಾರ್ಯವನ್ನು ಈ ಪಕ್ಷಗಳು ನಿರ್ಮಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.