ADVERTISEMENT

ತಲೆಕೆಳಗಾದ ಛತ್ತೀಸಗಢ ಸಮೀಕ್ಷೆ: ಯಾವ ಸಮೀಕ್ಷೆ ಏನು ಹೇಳಿದ್ದವು?

ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತಗಟ್ಟೆ ಸಮೀಕ್ಷೆ ಬಹುತೇಕ ನಿಜ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 15:53 IST
Last Updated 3 ಡಿಸೆಂಬರ್ 2023, 15:53 IST
<div class="paragraphs"><p>ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌</p></div>

ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌

   

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಚುನಾವಣಾ ಏಜೆನ್ಸಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಯು ಬಹುತೇಕ ನಿಜವಾಗಿದೆ. ಆದರೆ, ಛತ್ತೀಸಗಢದಲ್ಲಿ ಮತದಾರ ಪ್ರಭುಗಳು ಚುನಾವಣೋತ್ತರ ಸಮೀಕ್ಷೆಯನ್ನು ತಲೆಕೆಳಗೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. 

2024ರ ಲೋಕಸಭಾ ಚುನಾವಣೆಯ ‘ಸೆಮಿಫೈನಲ್‌’ ಎಂದೇ ಬಿಂಬಿತವಾಗಿದ್ದ ಐದು ರಾಜ್ಯದ ವಿಧಾನಸಭೆಗಳ ಪೈಕಿ ನಾಲ್ಕರ ಫಲಿತಾಂಶ ಹೊರಬಿದ್ದಿದೆ. 

ADVERTISEMENT

ತೆಲಂಗಾಣ ಹಾಗೂ ಛತ್ತೀಸಗಢದಲ್ಲಿ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದ ಚುಕ್ಕಾಣಿಯ ಸಮೀಪಕ್ಕೆ ಕರೆದೊಯ್ಯುತ್ತಾರೆ. ಅಲ್ಲದೇ, ಛತ್ತೀಸಗಢದಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ಲಭಿಸಲಿದೆ. ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂಬುದು ಬಹುತೇಕ ಸಮೀಕ್ಷೆಗಳ ಸಾರವಾಗಿತ್ತು.

ಆದರೆ, ತೆಲಂಗಾಣದಲ್ಲಿ ಮಾತ್ರವೇ ‘ಕೈ’ ಪಾಳಯ ಗೆಲುವಿನ ನಗೆ ಬೀರಿದೆ. ಛತ್ತೀಸಗಢದಲ್ಲಿ ಕಾಂಗ್ರೆಸ್‌ನ ಭೂಪೇಶ್ ಬಘೇಲ್ ಸರ್ಕಾರ ಮರಳಿ ಅಧಿಕಾರದ ಗದ್ದುಗೆ ಏರಲು ವಿಫಲವಾಗಿದೆ. ಇಲ್ಲಿ ಕಮಲ ಪಾಳಯ ಜಯಭೇರಿ ಬಾರಿಸಿದೆ. 

2018ರ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು.

ತೆಲಂಗಾಣದಲ್ಲಿ ಬಿಆರ್‌ಎಸ್‌ನ ಒಂದು ದಶಕದ ಆಡಳಿತ ಅಂತ್ಯಗೊಳ್ಳಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದ ಭವಿಷ್ಯ ಬಹುತೇಕ ನಿಜವಾಗಿದೆ. 

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದ ಸೂತ್ರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದ್ದವು.

ಮಧ್ಯಪ್ರದೇಶದಲ್ಲಿ ‘ಅಭೂತಪೂರ್ವ’ (140ಕ್ಕೂ ಅಧಿಕ ಸ್ಥಾನ) ಜಯಗಳಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ‘ಇಂಡಿಯಾ ಟುಡೇ’, ‘ಇಂಡಿಯಾ ಟಿವಿ’ ಹಾಗೂ ‘ಟುಡೇಸ್‌ ಚಾಣಕ್ಯ’ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಸಿ ವೋಟರ್‌, ಟೈಮ್ಸ್‌ ನೌ ಹಾಗೂ ಟಿವಿ 9 ಭಾರತವರ್ಷ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ. ಕಮಲ ಪಡೆ ಕೊಂಚ ಮೇಲುಗೈ ಸಾಧಿಸಿದೆ ಎಂಬುದು ಕೆಲ ಸಮೀಕ್ಷೆಗಳ ಲೆಕ್ಕಾಚಾರವಾಗಿತ್ತು. 

ಆದರೆ, ಎಲ್ಲಾ ಸಮೀಕ್ಷೆಗಳ ಅಂದಾಜಿಗೂ ಮೀರಿ ಮಧ್ಯಪ್ರದೇಶದಲ್ಲಿ ಬಿಜೆಪಿಯು ಅತಿಹೆಚ್ಚು ಸ್ಥಾನಗಳಲ್ಲಿ ವಿಜಯ ದುಂದುಭಿ ಬಾರಿಸಿದೆ. ಸಮೀಕ್ಷೆ ಹೇಳಿದಂತೆ ರಾಜಸ್ಥಾನದಲ್ಲೂ ಜಯದ ಕೇಕೆ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.