ADVERTISEMENT

Assembly Election Results: ಮತ್ತೆ ಸುಳ್ಳಾದ ಮತಗಟ್ಟೆ ಸಮೀಕ್ಷೆಗಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:08 IST
Last Updated 8 ಅಕ್ಟೋಬರ್ 2024, 16:08 IST
<div class="paragraphs"><p>ಹರಿಯಾಣದಲ್ಲಿ ಪಕ್ಷವು ಗೆಲುವು ಸಾಧಿಸಿದ್ದಕ್ಕೆ ಬಿಜೆಪಿ ಬೆಂಬಲಿಗರು ಮಂಗಳವಾರ ನವದೆಹಲಿಯ ಪಕ್ಷದ ಪ್ರಧಾನ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಿಸಿದರು </p></div>

ಹರಿಯಾಣದಲ್ಲಿ ಪಕ್ಷವು ಗೆಲುವು ಸಾಧಿಸಿದ್ದಕ್ಕೆ ಬಿಜೆಪಿ ಬೆಂಬಲಿಗರು ಮಂಗಳವಾರ ನವದೆಹಲಿಯ ಪಕ್ಷದ ಪ್ರಧಾನ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಿಸಿದರು

   

ಪಿಟಿಐ ಚಿತ್ರ

ನವದೆಹಲಿ: ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಮತದಾರರ ನಾಡಿಮಿಡಿತವನ್ನು ಸ್ಪಷ್ಟವಾಗಿ ಅರಿಯಲು ‌ವಿಫಲವಾಗಿವೆ. 

ADVERTISEMENT

ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲಿದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮೇಲುಗೈ ಸಾಧಿಸಲಿದೆ ಎಂದು ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು.  ಆದರೆ, ಹರಿಯಾಣದಲ್ಲಿ ಬಿಜೆಪಿಗೆ ಬಹುಮತ ಬಂದಿದ್ದು, ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಲು ಸಜ್ಜಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌–ಕಾಂಗ್ರೆಸ್‌ ಮೈತ್ರಿಗೆ ಬಹುಮತ ಸಿಕ್ಕಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. 

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ 50ಕ್ಕೂ ಹೆಚ್ಚು ಸ್ಥಾನಗಳಿಸಲಿದೆ ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಬಿಜೆಪಿಯು 30 ಸ್ಥಾನಗಳನ್ನು ದಾಟುವುದು ಕಷ್ಟ ಎಂದು ಭವಿಷ್ಯ ನುಡಿದಿದ್ದವು. 

ಸಿ–ವೋಟರ್‌–ಇಂಡಿಯಾ ಟುಡೇ ಸಮೀಕ್ಷೆಯು ಕಾಂಗ್ರೆಸ್‌ಗೆ 50ರಿಂದ 58 ಸ್ಥಾನಗಳು ಬರಬಹುದು ಎಂದು ಹೇಳಿತ್ತು. ಬಿಜೆಪಿ 20ರಿಂದ 28 ಸ್ಥಾನ ಗಳಿಸಬಹುದು ಎಂದಿತ್ತು. ರಿಪಬ್ಲಿಕ್‌ ಭಾರತ್‌–ಮ್ಯಾಟ್ರಿಜ್‌ ಸಮೀಕ್ಷೆಯು 55ರಿಂದ 62 ಸ್ಥಾನಗಳು ಕಾಂಗ್ರೆಸ್‌ಗೆ ಮತ್ತು 18ರಿಂದ 24 ಸ್ಥಾನಗಳು ಬಿಜೆಪಿಗೆ ಸಿಗಬಹುದು ಎಂದಿತ್ತು. 

ಚುನಾವಣಾ ಫಲಿತಾಂಶ ಇದಕ್ಕೆ ವ್ಯತಿರಿಕ್ತವಾಗಿ ಬಂದಿದ್ದು, ಬಿಜೆಪಿ 48 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 37 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಸಿ–ಕಾಂಗ್ರೆಸ್‌ ಮೈತ್ರಿ 40ರಿಂದ 48 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಿ–ಮೋಟರ್‌–ಇಂಡಿಯಾ ಟುಡೇ ಮತಗಟ್ಟೆ ಸಮೀಕ್ಷೆ ಹೇಳಿತ್ತು. ಈ ಪೈಕಿ ಪ್ರಾದೇಶಿಕ ಪಕ್ಷವಾದ ಎನ್‌ಸಿ 33 ಸ್ಥಾನಗಳನ್ನು ಗಳಿಸಲಿದೆ ಎಂದಿತ್ತು. ಬಿಜೆಪಿಯು 27ರಿಂದ 32 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದೂ ಹೇಳಿತ್ತು. 

ರಿಪಬ್ಲಿಕ್‌–ಗುಲಿಸ್ತಾನ್‌ ಸಮೀಕ್ಷೆಯು ಎನ್‌ಸಿ 28ರಿಂದ 30 ಸ್ಥಾನಗಳು, ಕಾಂಗ್ರೆಸ್‌ 3ರಿಂದ 6  ಮತ್ತು ಬಿಜೆಪಿ 28ರಿಂದ 30 ಸ್ಥಾನಗಳನ್ನು ಗಳಿಸಲಿವೆ ಎಂದು ಭವಿಷ್ಯ ನುಡಿದಿತ್ತು.

ದಿ ಪೀಪಲ್ಸ್‌ ಪಲ್ಸ್‌ ಸಮೀಕ್ಷೆಯು ಎನ್‌ಸಿಗೆ 33ರಿಂದ 35, ಕಾಂಗ್ರೆಸ್‌ಗೆ 13ರಿಂದ 15 ಮತ್ತು ಬಿಜೆಪಿ 23ರಿಂದ 27 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿತ್ತು. 

ಚುನಾವಣಾ ಫಲಿತಾಂಶದ ಪ್ರಕಾರ, ಎನ್‌ಸಿ 42 ಸ್ಥಾನಗಳು, ಕಾಂಗ್ರೆಸ್‌ ಆರು ಸ್ಥಾನ, ಈ ಮೈತ್ರಿಯ ಭಾಗವಾಗಿರುವ ಸಿಪಿಎಂ ಒಂದು ಸ್ಥಾನ ಗಳಿಸಿವೆ. 

ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಸುಳ್ಳಾಗಿದ್ದವು. ಬಿಜೆಪಿ 350ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುವುದರ ಮೂಲಕ ಜಯಭೇರಿ ಬಾರಿಸಲಿದೆ ಎಂದು ಬಹುತೇಕ ಎಲ್ಲ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, 240 ಸ್ಥಾನಗಳನ್ನಷ್ಟೇ ಅದಕ್ಕೆ ಸಾಧ್ಯವಾಗಿತ್ತು. ಎನ್‌ಡಿಎ ಮೈತ್ರಿ ಕೂಟ ಒಟ್ಟಾಗಿ 293 ಸ್ಥಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.