ADVERTISEMENT

ಜಾರ್ಖಂಡ್ CM ಆಪ್ತನ ಅಪಹರಣಕ್ಕೆ ಯತ್ನ: ಮುಖ್ಯ ಚುನಾವಣಾಧಿಕಾರಿ ವಿರುದ್ಧ JMM ಆರೋಪ

ಏಜೆನ್ಸೀಸ್
Published 28 ಅಕ್ಟೋಬರ್ 2024, 2:57 IST
Last Updated 28 ಅಕ್ಟೋಬರ್ 2024, 2:57 IST
ಹೇಮಂತ್‌ ಸೊರೇನ್
ಹೇಮಂತ್‌ ಸೊರೇನ್   

ರಾಂಚಿ: ಆಡಳಿತಾರೂಢ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ವಕ್ತಾರ ಸುಪ್ರಿಯೊ ಭಟ್ಟಾಚಾರ್ಯ ಅವರು, ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಆಪ್ತನನ್ನು ಅಪಹರಿಸುವ ಯತ್ನ ನಡೆದಿದೆ ಎಂದು ಹೇಳಿದ್ದು, ಚುನಾವಣಾ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ, ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಕೆ. ರವಿ ಕುಮಾರ್, ಐಪಿಎಸ್‌ ಅಧಿಕಾರಿಗಳಾದ ಸಂಜಯ್‌ ಆನಂದ್‌ ಲಾಟ್ಕರ್‌, ಅಮೋಲ್‌ ವೇಣುಕಾಂತ್‌ ಹೋಮ್ಕರ್‌ ಅವರನ್ನು ಚುನಾವಣಾ ಕೆಲಸದಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾ ಪ್ರಕ್ರಿಯೆಗಳಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎಂದೂ ದೂರಿದ್ದಾರೆ.

ADVERTISEMENT

ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಭಟ್ಟಾಚಾರ್ಯ, 'ಬರ್ಹೈತ್‌ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಿಎಂ ಹೇಮಂತ್‌ ಸೊರೇನ್‌ ಅವರ ಆಪ್ತ ಮಂಡಲ್‌ ಮುರ್ಮು ಹಾಗೂ ಇತರ ಕೆಲವರು ಇದ್ದ ವಾಹನವನ್ನು ಗಿರಿದಿಹ್‌ ಪೊಲೀಸರು ಭಾನುವಾರ ತಪಾಸಣೆ ನಡೆಸಿದ್ದರು. ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಅದನ್ನು ಹೇಳದ ಕಾರಣ, ವಾಹನವನ್ನು ವಶಕ್ಕೆ ಪಡೆದಿದ್ದರು. ರವಿ ಕುಮಾರ್, ಲಾಟ್ಕರ್‌, ಹೋಮ್ಕರ್‌ ಅವರು ಅನಗತ್ಯವಾಗಿ ಗಿರಿದಿಹ್‌ ಆಡಳಿತ ಮತ್ತು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ' ಎಂದು ದೂರಿದ್ದಾರೆ.

'ಈ ಸುದ್ದಿ ಹರಿದಾಡುತ್ತಿದ್ದಂತೆ, ವಾಹನವನ್ನು ಬಿಟ್ಟುಕಳುಹಿಸಲಾಗಿದೆ' ಎಂದು ತಿಳಿಸಿದ್ದಾರೆ.

ಇದು ಗಂಭೀರ ವಿಚಾರ ಎಂದು ಉಲ್ಲೇಖಿಸಿರುವ ಜೆಎಂಎಂ ನಾಯಕ, ಚುನಾವಣಾ ಆಯೋಗ ತನಿಖೆ ನಡೆಸಬೇಕು ಹಾಗೂ ಅಧಿಕಾರಿಗಳನ್ನು ತಕ್ಷಣವೇ ಚುನಾವಣಾ ಕೆಲಸಗಳಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್‌ 13 ಹಾಗೂ 20ರಂದು ಎರಡು ಹಂತಗಳಲ್ಲಿ ಮತನಾದ ನಡೆಯಲಿದೆ. ಚುನಾವಣೆಯ ಫಲಿತಾಂಶ 23ರಂದು ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.