ADVERTISEMENT

ಚುನಾವಣಾ ಆಯೋಗದ ನೆರವಿನಿಂದ BJP ಮತದಾರರ ಪಟ್ಟಿ ತಿರುಚುತ್ತಿದೆ: ಸಂಜಯ್ ರಾವುತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2024, 6:56 IST
Last Updated 20 ಅಕ್ಟೋಬರ್ 2024, 6:56 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹಲವು ವ್ಯತ್ಯಾಸಗಳು ಕಂಡು ಬಂದಿವೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಚೆಗೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ಮತದಾರರ ಪಟ್ಟಿಯನ್ನು ತಿರುಚುವ ಪ್ರಯತ್ನ ಮಾಡಲಾಗಿತ್ತು. ಇದೀಗ ಮಹಾರಾಷ್ಟ್ರದಲ್ಲೂ ಚುನಾವಣಾ ಆಯೋಗದ ಸಹಾಯದಿಂದ ಬಿಜೆಪಿಗರು ಮತದಾರರ ಪಟ್ಟಿಯನ್ನು ಗೊಂದಲಕ್ಕೀಡು ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಇದೇ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ನಾವು (ಇಂಡಿಯಾ ಮೈತ್ರಿಕೂಟ) ಅವರನ್ನು ಸೋಲಿಸಿದ್ದೇವೆ. ಇದಕ್ಕೆ ಪ್ರತಿಯಾಗಿ ಬಿಜೆಪಿಗರು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲು ಮುಂದಾಗಿದ್ದಾರೆ.

ADVERTISEMENT

‘ಮಹಾರಾಷ್ಟ್ರ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾವಿಕಾಸ ಆಘಾಡಿ (ಎಂವಿಎ) ಸ್ಪರ್ಧಿಸಲಿರುವ ಕ್ಷೇತ್ರಗಳಲ್ಲಿ ನಮಗೆ ಮತ ಹಾಕುವಂತವರನ್ನು ಪತ್ತೆಹಚ್ಚಿ ಅವರ ಹೆಸರಿನಲ್ಲಿ ನಕಲಿ ಮತದಾರರ ಪಟ್ಟಿಯನ್ನು ಸೃಷ್ಟಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ವಿಧಾನಸಭೆ ಚುನಾವಣೆಯ ನಂತರ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿರುವುದಾಗಿ ರಾವುತ್ ತಿಳಿಸಿದ್ದಾರೆ.

ಸೀಟು ಹಂಚಿಕೆ ಮತ್ತು ಇತರ ಅಂಶಗಳ ಕುರಿತು ಚರ್ಚಿಸಲು ಇಂದು ಸಭೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಈಚೆಗೆ ಚುನಾವಣಾ ಆಯೋಗವು ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಮಹಾರಾಷ್ಟ್ರದಲ್ಲಿ ನವೆಂಬರ್‌ 20ರಂದು ಮತದಾನ ನಡೆಯಲಿದೆ. ಇತ್ತ ಜಾರ್ಖಂಡ್‌ನ 81 ಕ್ಷೇತ್ರಗಳಲ್ಲಿ ಎರಡು ಹಂತಗಳಲ್ಲಿ (ನವೆಂಬರ್‌ 13 ಹಾಗೂ 20) ಮತದಾನ ಜರುಗಲಿದೆ. ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ.

ಜಾರ್ಖಂಡ್‌ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗುತ್ತಿರುವಂತೆಯೇ ಎಲ್ಲ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ಆರಂಭವಾಗಿದೆ. ಬಿಜೆಪಿಯು ಜಾರ್ಖಂಡ್‌ ವಿಧಾನಸಭೆಗೆ ತನ್ನ 66 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ‘ಇಂಡಿಯಾ’ ಮೈತ್ರಿಕೂಟದ ಜೆಎಂಎಂ ಹಾಗೂ ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರೆ, ಈ ಪಕ್ಷಗಳ ನಡೆಗೆ ಮೈತ್ರಿಕೂಟದ ಮತ್ತೊಂದು ಅಂಗಪಕ್ಷ ಆರ್‌ಜೆಡಿ ಅಸಮಾಧಾನ ವ್ಯಕ್ತಪಡಿಸಿದೆ. ತನ್ನ ಮುಂದೆ ಎಲ್ಲ ಆಯ್ಕೆಗಳು ಮುಕ್ತವಾಗಿವೆ ಎಂದೂ ಹೇಳಿದೆ. ಮಹಾರಾಷ್ಟ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ಟಿಕೆಟ್‌ ಹಂಚಿಕೆ ಅಂತಿಮಗೊಳ್ಳುವ ಮೊದಲೇ ಕಾಂಗ್ರೆಸ್‌ ಪಕ್ಷ ಸಿಇಸಿ ಸಭೆ ಕರೆದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.