ADVERTISEMENT

ಜಾತಿ ಸಮೀಕರಣ: ಕಾಂಗ್ರೆಸ್‌ಗೆ ಸತ್ವ ಪರೀಕ್ಷೆ

ದಲಿತರ, ಮುಸ್ಲಿಮರ, ಮರಾಠರ ಮತಗಳನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್‌: ನಾಯಕರನ್ನು ಒಗ್ಗೂಡಿಸುವುದು ಹೈಕಮಾಂಡ್‌ ಮುಂದಿರುವ ಸವಾಲು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 23:30 IST
Last Updated 17 ಅಕ್ಟೋಬರ್ 2024, 23:30 IST
   

ನವದೆಹಲಿ: ಕಳೆದೊಂದು ವರ್ಷದಿಂದ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವು ಕೊನೆಯ ಕ್ಷಣದಲ್ಲಿ ಕೈಚೆಲ್ಲಿದ್ದೇ ಹೆಚ್ಚು.

ಮಹಾರಾಷ್ಟ್ರ ಹಾಗೂ ಛತ್ತೀಸಗಢದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭಾವಿಸಿದವರು ಸಾಕಷ್ಟು ಮಂದಿ. ಪಕ್ಷದ ನಾಯಕರ ಆಂತರಿಕ ಕಿತ್ತಾಟದಿಂದ ಆ ರಾಜ್ಯಗಳಲ್ಲಿ ಪಕ್ಷ ಸೋತಿತು. ಇದಕ್ಕೆ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಹರಿಯಾಣ. ಹರಿಯಾಣದಲ್ಲಿ ಮತ್ತೆ ಅಧಿಕಾರಕ್ಕೆ ಏರುವ ಬಗ್ಗೆ ಬಿಜೆಪಿಗೂ ವಿಶ್ವಾಸ ಇರಲಿಲ್ಲ. ‘ಕೈ’ ಪಾಳಯದ ಹಿರಿಯ ಕಟ್ಟಾಳುಗಳ ಕಚ್ಚಾಟದ ಲಾಭ ಪಡೆದ ಕಮಲ ಪಾಳಯ ಮತ್ತೆ ಗೆದ್ದಿತು. ಇದೀಗ, ಮಹಾರಾಷ್ಟ್ರ ಚುನಾವಣೆಯ ಸರದಿ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ದೊಡ್ಡ ದಂಡೇ ಇದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಮೂರು–ನಾಲ್ಕು ಮಂದಿ ಇದ್ದಾರೆ. ಈ ನಾಯಕರನ್ನು ಒಗ್ಗೂಡಿಸಿ ಪಕ್ಷವನ್ನು ಚುನಾವಣೆಗೆ ಅಣಿಗೊಳಿಸುವುದು ಹೈಕಮಾಂಡ್‌ ಮುಂದಿರುವ ಪ್ರಮುಖ ಸವಾಲು. ಸೋಲುವುದನ್ನೇ ಛಾತಿ ಮಾಡಿಕೊಂಡಿರುವ ‘ಕೈ’ ಪಾಲಿಗೆ ಈ ಚುನಾವಣೆ ಸತ್ವ ಪರೀಕ್ಷೆ ಇದ್ದಂತೆ. 

ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆ‍ಪಿ ಹಾಗೂ ಶಿವಸೇನಾ (ಶಿಂದೆ ಬಣ) ಮುಖ್ಯವಾಗಿ ಒಬಿಸಿ ಮತಗಳ ಮೇಲೆ ಕಣ್ಣಿಟ್ಟಿವೆ. ಇತ್ತೀಚಿನ ವರ್ಷಗಳಲ್ಲಿ ದಲಿತರ, ಮುಸ್ಲಿಮರ ಹಾಗೂ ಮರಾಠರ ಮತಗಳನ್ನು ಕಾಂಗ್ರೆಸ್‌ ಪಕ್ಷವು ನೆಚ್ಚಿಕೊಂಡಿದೆ.

ADVERTISEMENT

ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ, ರಾಜ್ಯಕ್ಕೆ ವೀಕ್ಷಕರನ್ನಾಗಿ 13 ಹಿರಿಯ ನಾಯಕರನ್ನು ಕಾಂಗ್ರೆಸ್‌ ನಿಯೋಜಿಸಿದೆ. ಜಾತಿ ಲೆಕ್ಕಾಚಾರದ ಆಧಾರದಲ್ಲಿ ಈ ನೇಮಕ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಗೃಹ ಸಚಿವ ಜಿ.ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಮಾಜಿ ಮುಖ್ಯಮಂತ್ರಿಗಳಾದ ಅಶೋಕ್‌ ಗೆಹಲೋತ್‌, ಭೂಪೇಶ್‌ ಬಘೇಲ್‌, ಚರಣ್‌ಜಿತ್ ಸಿಂಗ್ ಚನ್ನಿ, ಮಾಜಿ ಉಪಮುಖ್ಯಮಂತ್ರಿಗಳಾದ ಸಚಿನ್‌ ಪೈಲಟ್‌, ಟಿ.ಎಸ್‌.ಸಿಂಗ್‌ದೇವ್‌ ಸೇರಿದ್ದಾರೆ. 

‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಎರಡು ವಿಷಯಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು. ಇಲ್ಲದಿದ್ದರೆ, ಮಹಾರಾಷ್ಟ್ರದಲ್ಲಿಯೂ ಹರಿಯಾಣದ ರೀತಿಯಲ್ಲಿ ಹೊಡೆತ ಬೀಳುವ ಸಾಧ್ಯತೆ ಇದೆ’ ಎಂದು ರಾಜಕೀಯ ವಿಶ್ಲೇಷಕರು ಎಚ್ಚರಿಸುತ್ತಾರೆ. ಮಾಲಿ, ಧಂಗಾರ್‌, ವಂಜಾರಿಯಂತಹ ಹಿಂದುಳಿದ ಸಮುದಾಯಗಳು ದಶಕಗಳಿಂದ ಬಿಜೆಪಿಗೆ ಬೆನ್ನಿಗೆ ನಿಂತಿವೆ. ಈ ಸಮುದಾಯಗಳ ಮತ ಬ್ಯಾಂಕ್‌ ಬಲಪಡಿಸಲು ಬಿಜೆಪಿ ಆಕ್ರಮಣಕಾರಿ ಪ್ರಚಾರ ನಡೆಸುತ್ತಿದೆ. ಹರಿಯಾಣದಲ್ಲಿ ಬಿಜೆಪಿ ಗೆಲುವಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಪ್ರಮುಖ ಪಾತ್ರ ವಹಿಸಿತ್ತು. ಹರಿಯಾಣದ ಮಾದರಿಯಲ್ಲಿ ಮಹಾರಾಷ್ಟ್ರಕ್ಕೂ ಸ್ವಯಂಸೇವಕರ ದೊಡ್ಡ ಪಡೆಯನ್ನು ಪ್ರಚಾರಕ್ಕೆ ಕಳುಹಿಸಿಕೊಟ್ಟಿದೆ. ಯಾವುದೇ ಅಪೇಕ್ಷೆ ಇಲ್ಲದೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ಈ ಸ್ವಯಂಸೇವಕರು ಫಲಿತಾಂಶವನ್ನು ಏರುಪೇರು ಮಾಡುವಲ್ಲಿ ಸಮರ್ಥರು. 

ಇನ್ನೊಂದು, ಮನೋಜ್‌ ಜಾರಂಗೆ ನೇತೃತ್ವದಲ್ಲಿ ನಡೆದ ಮರಾಠ ಮೀಸಲಾತಿ ಚಳವಳಿಯು ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು. ‘ಮರಾಠ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಬೇಕು ಎಂಬುದು ಜಾರಂಗೆ ಅವರ ಪ್ರಮುಖ ಬೇಡಿಕೆ. ಒಂದು ವೇಳೆ ಮರಾಠರಿಗೆ ಮೀಸಲಾತಿ ಭರವಸೆ ನೀಡಿದರೆ ಕುನ್ಬಿ ಸಮುದಾಯದವರು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಜಾರಂಗೆ ಈಗಾಗಲೇ ಪ್ರಕಟಿಸಿದ್ದಾರೆ. ಇದರಿಂದಾಗಿ, ಮರಾಠವಾಡ ವಿಭಾಗದಲ್ಲಿ ಪಕ್ಷಕ್ಕೆ ಪ್ರಮುಖ ಸವಾಲು ಎದುರಾಗುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ವಿಶ್ಲೇಷಿಸಿದರು. 

‘ಇನ್ನೊಂದೆಡೆ, ಚುನಾವಣಾ ಮೈತ್ರಿ ಸಂಬಂಧ ಜಾರಂಗೆ ಅವರು ಎಐಎಂಐಎಂ ನಾಯಕರೊಂದಿಗೆ ಮಾತುಕತೆ ಆರಂಭಿಸಿದ್ದಾರೆ. ಈ ಕೂಟದ ಮೈತ್ರಿಯಿಂದ ಹೊಡೆತ ಬೀಳುವುದು ಕಾಂಗ್ರೆಸ್‌ ಮತಬುಟ್ಟಿಗೆ. ಈ ಮೈತ್ರಿಕೂಟವು ಶೇ 2–3ರಷ್ಟು ಮತ ಸೆಳೆದರೂ ಅದರ ಪರಿಣಾಮ ದೊಡ್ಡದಾಗಿರಲಿದೆ’ ಎಂದು ಅವರು ಅಭಿಪ್ರಾಯಪಟ್ಟರು. 

 ‘ಕಾಂಗ್ರೆಸ್‌ ಪಕ್ಷವು ಕನಿಷ್ಠ 110 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಉದ್ದೇಶಿಸಿದೆ. ಅಧಿಕ ಸೀಟುಗಳಿಗಾಗಿ ಮಿತ್ರ ಪಕ್ಷಗಳು ಪಟ್ಟು ಹಿಡಿದಿವೆ. ಸೀಟು ಹೊಂದಾಣಿಕೆ ಹಾಗೂ ಪ್ರತಿ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಹೆಸರನ್ನು ಆಖೈರುಗೊಳಿಸುವುದು ತಲೆನೋವಿನ ಕೆಲಸ. 3–4 ತಿಂಗಳಿಂದ ಮಾತುಕತೆ ನಡೆಯುತ್ತಿದ್ದರೂ ಸೀಟು ಹಂಚಿಕೆ ವಿಷಯದಲ್ಲಿ ಸಹಮತಕ್ಕೆ ಬರಲು ಮೈತ್ರಿಕೂಟಕ್ಕೆ ಸಾಧ್ಯವಾಗಿಲ್ಲ. ಆದರೆ, ಈ ವಿಷಯದಲ್ಲಿ ಮಹಾಯುತಿ ಮೈತ್ರಿಕೂಟ ಒಂದು ಹೆಜ್ಜೆ ಮುಂದಿದೆ. ಇದೇ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ವ್ಯತ್ಯಾಸ’ ಎಂದು ಅವರು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.