ನವದೆಹಲಿ: ಹರಿಯಾಣ ಜನರು ದಶಕದಿಂದ ಅನುಭವಿಸಿದ ನೋವನ್ನು ಮುಂಬರುವ ಕಾಂಗ್ರೆಸ್ ಸರ್ಕಾರ ಕಳೆಯಲಿದೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಉಲ್ಲೇಖಿಸಿ ರಾಹುಲ್ ಪ್ರತಿಕ್ರಿಯಿಸಿದ್ದಾರೆ.
ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಬಿಜೆಪಿಯು ತನ್ನ ಆಡಳಿತಾವಧಿಯಲ್ಲಿ ಹರಿಯಾಣದ ಸಮೃದ್ಧಿ, ಕನಸುಗಳು ಮತ್ತು ಅಧಿಕಾರವನ್ನು ಕಸಿದುಕೊಂಡಿದೆ' ಎಂದು ದೂರಿದ್ದಾರೆ.
'ಅಗ್ನಿವೀರ್ ಯೋಜನೆಯು ದೇಶಭಕ್ತ ಯುವಕರ ಕನಸುಗಳನ್ನು ಕಸಿದುಕೊಂಡಿದೆ. ಸಾಕಷ್ಟು ಕುಟುಂಬಗಳ ನಗುವನ್ನು ನಿರುದ್ಯೋಗ ಕಿತ್ತುಕೊಂಡಿದೆ. ಮಹಿಳೆಯರ ಸ್ವಾವಲಂಬನೆಯನ್ನು ಹಣದುಬ್ಬರ ದೋಚಿದೆ' ಎಂದು ಆರೋಪಿಸಿದ್ದಾರೆ.
'ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕೃಷಿಕರ ಹಕ್ಕುಗಳನ್ನು ಕಸಿಯಲು ಹಾಗೂ ನೋಟು ರದ್ದು, ಜಿಎಸ್‌ಟಿ ಹೇರಿಕೆ ಮೂಲಕ ಲಕ್ಷಾಂತರ ಸಣ್ಣ ವ್ಯಾಪಾರಿಗಳ ಆದಾಯವನ್ನೇ ಕಿತ್ತುಕೊಂಡಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, 'ತಮ್ಮ ಆಪ್ತರಿಗಷ್ಟೇ ಲಾಭ ಮಾಡಿಕೊಡುವ ಮೂಲಕ ಹರಿಯಾಣದ ಸ್ವಾಭಿಮಾನಕ್ಕೂ ಚ್ಯುತಿ ತಂದಿದೆ' ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
2 ಲಕ್ಷ ಉದ್ಯೋಗ ಸೃಷ್ಟಿ, ಮಾದಕ ವಸ್ತು ಮುಕ್ತ ಹರಿಯಾಣ, ₹ 25 ಲಕ್ಷದ ವರೆಗೆ ಉಚಿತ ಚಿಕಿತ್ಸೆ, ಮಹಿಳೆಯರಿಗೆ ಪ್ರತಿ ತಿಂಗಳು ₹ 2 ಸಾವಿರ, ₹ 500ಕ್ಕೆ ಅಡುಗೆ ಅನಿಲ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ, ರೈತರ ಕಲ್ಯಾಣಕ್ಕಾಗಿ ಆಯೋಗ, ಹುತಾತ್ಮ ಯೋಧರ ಕುಟುಂಬಗಳಿಗೆ ₹ 2 ಕೋಟಿ ಪರಿಹಾರ ಸೇರಿದಂತೆ ಹಲವು ಯೋಜನೆಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. 8ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.