ಮಹಾರಾಷ್ಟ್ರದಲ್ಲಿ ಮತದಾನ ನಡೆಯುತ್ತಿದೆ. ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಸುಳ್ಳು ಭರವಸೆಗಳನ್ನು ನೀಡಿವೆ. ನಾವು ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ. ಮಹಾರಾಷ್ಟ್ರ ಜನರು ಎಂವಿಎಗೆ ಮತ ನೀಡಲು ನಿರ್ಧರಿಸಿದ್ದಾರೆ. ಎಂವಿಎ ಅಧಿಕಾರಕ್ಕೇರಲಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ಕ್ಷೇತ್ರ ಹಾಗೂ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮೀರಾಪುರ ಕ್ಷೇತ್ರದಲ್ಲಿ ಬೇರೆಬೇರೆ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಯಾಗಿದೆ. ಪೊಲೀಸರು, ಕೂಡಲೇ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಮತದಾನ ಮುಂದುವರಿದಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಗಾಂಡೇಯ್ ವಿಧಾನಸಭೆ ಕ್ಷೇತ್ರದಲ್ಲಿ ಜೆಎಂಎಂ ಪಕ್ಷದ ಅಭ್ಯರ್ಥಿಯೂ ಆಗಿರುವ ಅವರು, ಜಾರ್ಖಂಡ್ ರಾಜ್ಯ ರಚನೆಯಾದ ಬಳಿಕ, ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಸೂಕ್ತ ಗೌರವ ಲಭಿಸಿದೆ. ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರು (ಬಿಜೆಪಿಯವರು) ಅಭಿವೃದ್ಧಿಯ ಬಗ್ಗೆ ಚರ್ಚಿಸುವುದಿಲ್ಲ. ಬದಲಾಗಿ, ವಿಭಜನೆಯ ಬಗ್ಗೆಯಷ್ಟೇ ಮಾತನಾಡುತ್ತಾರೆ. ರಾಜ್ಯದಲ್ಲಿ ಖಂಡಿತವಾಗಿಯೂ ಮತ್ತೆ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ ಅವರು ಮತ ಚಲಾಯಿಸಲು ತೆರಳುವುದಕ್ಕೂ ಮುನ್ನ, ತಮ್ಮ ಕುಟುಂಬದವರ ಆಶೀರ್ವಾದ ಪಡೆದರು. ಈ ಸಂದರ್ಭದ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ.
ರಾಜ್ಯದ ಪ್ರತಿಯೊಬ್ಬ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಪ್ರಜಾಪ್ರಭುತ್ವದ ಉತ್ಸವಕ್ಕೆ ಸೊಬಗು ನೀಡಿ. ಯುವಕರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ನಾನು ಮನವಿ ಮಾಡುತ್ತೇನೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಪಾಲ್ಘರ್‌ನ ಹೋಟೆಲ್‌ನಲ್ಲಿ ಮತದಾರರಿಗೆ ನಗದು ಹಂಚಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಪಕ್ಷದ ಅಭ್ಯರ್ಥಿ ರಾಜನ್ ನಾಯಕ್ ಮತ್ತು ಇತರರ ವಿರುದ್ಧ ಪೊಲೀಸರು ಮಂಗಳವಾರ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ರಾಜ್ಯ ಚುನಾವಣಾಧಿಕಾರಿ ಎಸ್. ಚೊಕ್ಕಲಿಂಗಮ್, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಖ್ಯಾತನಾಮರು ಆರಂಭದಲ್ಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದೆ.
ಮಹಾರಾಷ್ಟ್ರ ಎಲ್ಲ 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಸದ್ಯ ಅಧಿಕಾರದಲ್ಲಿರುವ 'ಮಹಾಯುತಿ' ಹಾಗೂ ವಿರೋಧ ಪಕ್ಷಗಳ 'ಮಹಾ ವಿಕಾಸ ಆಘಾಡಿ' ಮೈತ್ರಿಕೂಟದ ನಡುವೆ ನೇರ ಹಣಾಹಣಿ ಇದೆ.
ಜಾರ್ಖಂಡ್ ವಿಧಾನಸಭೆಯ ಎರಡನೇ ಹಂತದ 38 ಕ್ಷೇತ್ರಗಳಲ್ಲೂ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ. ಇತ್ತ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹಾಗೂ ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ಆರಂಭಗೊಂಡಿದ್ದು, ಮತದಾರರು ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.