ADVERTISEMENT

ಮಹಾ ಚುನಾವಣೆ: ಆರಂಭದಲ್ಲೇ ಮತ ಚಲಾಯಿಸಿದ ಚುನಾವಣಾಧಿಕಾರಿ, RBI ಗವರ್ನರ್, ಸಚಿನ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 4:22 IST
Last Updated 20 ನವೆಂಬರ್ 2024, 4:22 IST
   

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ರಾಜ್ಯ ಚುನಾವಣಾಧಿಕಾರಿ ಎಸ್. ಚೊಕ್ಕಲಿಂಗಮ್‌, ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಸೇರಿದಂತೆ ಹಲವು ಖ್ಯಾತನಾಮರು ಆರಂಭದಲ್ಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇಲ್ಲಿನ ಎಲ್ಲ 288 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ.

ಸದ್ಯ ಅಧಿಕಾರದಲ್ಲಿರುವ 'ಮಹಾಯುತಿ' ಹಾಗೂ ವಿರೋಧ ಪಕ್ಷಗಳ 'ಮಹಾ ವಿಕಾಸ ಆಘಾಡಿ' ಮೈತ್ರಿಕೂಟದ ನಡುವೆ ನೇರ ಹಣಾಹಣಿ ಇದೆ.

ADVERTISEMENT

ಬಿಜೆಪಿಯು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮತ್ತು ಅಜಿತ್‌ ಪವಾರ್ ಅವರ ಎನ್‌ಸಿಪಿಯೊಂದಿಗೆ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದಲ್ಲಿದೆ.

ಕಾಂಗ್ರೆಸ್‌, ಮಾಜಿ ಸಿಎಂ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ, ಶರದ್‌ ಪವಾರ್‌ ಅವರ ಎನ್‌ಸಿಪಿ ಇರುವ ಎಂವಿಎ ಕೂಟದಲ್ಲಿವೆ.

ರಾಜ್ಯ ಚುನಾವಣಾಧಿಕಾರಿ ಚೊಕ್ಕಲಿಂಗಮ್‌ ಅವರು ಚೊಲಬಾ ಕ್ಷೇತ್ರ ವ್ಯಾಪ್ತಿಯ ಸಚಿವಾಲಯ ಜಿಮ್ಖಾನಾ ಮತಗಟ್ಟೆಯಲ್ಲಿ ಮತ ಹಾಕಿದ್ದಾರೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಮುಂಬೈನಲ್ಲಿ ಮತದಾನ ಮಾಡಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್‌ ಅವರು ಮಲಬಾರ್‌ ಹಿಲ್‌ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಾಜಭವನ ಕ್ಲಬ್‌ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದಾರೆ.

ಸಚಿನ್‌ ಅವರು ಪತ್ನಿ ಅಂಜಲಿ ಹಾಗೂ ಮಗಳು ಸಾರಾ ಅವರೊಂದಿಗೆ ತೆರಳಿ ಮತ ಚಲಾಯಿಸಿದ್ದಾರೆ.

ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಭೂಷಣ್‌ ಗರ್ನಾನಿ ಅವರು, ಮತ ಕೇಂದ್ರಗಳಲ್ಲಿ ಸುವ್ಯವಸ್ಥೆ ಕಲ್ಪಿಸಿದ್ದೇವೆ. ಪ್ರತಿಯೊಬ್ಬರೂ ಹೊರಬಂದು ಮತದಾನ ಮಾಡಬೇಕು ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿರುವ ಅಕ್ಷಯ್‌ ಕುಮಾರ್‌, ಮತಗಟ್ಟೆಯಲ್ಲಿ ಉತ್ತಮವಾಗಿ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಮತದಾನ ಮಾಡಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

ಕಾಟೇವಾಡಿಯಲ್ಲಿ ಮತ ಚಲಾಯಿಸಿರುವ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಕುಟುಂಬ ಸಮೇತವಾಗಿ ಮತದಾನ ಮಾಡಿದ್ದೇನೆ. ಜನರು ತಮ್ಮ ಮೂಲಭೂತ ಹಕ್ಕು ಚಲಾಯಿಸಿ. ಸರಿಯಾದ ನಾಯಕತ್ವಕ್ಕೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿ ಎಂದು ಮನವಿ ಮಾಡಿದ್ದಾರೆ.

ಶರದ್‌ ಪವಾರ್ ನೇತೃತ್ವದ ಸಂಸದೆ ಸುಪ್ರಿಯಾ ಸುಳೆ ಅವರು ಬಾರಾಮತಿಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಎಕ್ಸ್‌/ಟ್ವಿಟರ್‌ನಲ್ಲಿ ಚಿತ್ರ ಹಂಚಿಕೊಂಡಿರುವ ಅವರು, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಸಂವಿಧಾನದ ಮೌಲ್ಯವನ್ನು ಕಾಪಾಡುವಂತೆ ಕರೆ ನೀಡಿದ್ದಾರೆ.

ಬಾಲಿವುಡ್‌ ನಟರಾದ ರಾಜ್‌ಕುಮಾರ್‌ ರಾವ್‌, ಸೋನು ಸೂದ್‌, ನಿರ್ಮಾಪಕ ಫರ್ಹಾನ್‌ ಅಕ್ತರ್‌, ಅವರ ಸಹೋದರಿ ಜೋಯಾ ಅಕ್ತರ್‌ ಅವರೂ ಮತ ಚಲಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.