ADVERTISEMENT

‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ

ಪಿಟಿಐ
Published 16 ನವೆಂಬರ್ 2024, 12:45 IST
Last Updated 16 ನವೆಂಬರ್ 2024, 12:45 IST
<div class="paragraphs"><p>ಗೌರವ್ ಭಾಟಿಯಾ</p></div>

ಗೌರವ್ ಭಾಟಿಯಾ

   

-ಪಿಟಿಐ ಚಿತ್ರ

ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ ಹಾಕುವಂತೆ ತಮ್ಮ ಸಮುದಾಯದವರಿಗೆ ಮುಸ್ಲಿಂ ಸಂಸ್ಥೆಗಳು ಮನವಿ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.

ADVERTISEMENT

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಧರ್ಮದ ಆಧಾರದ ಮೇಲೆ ಮತ ಹಾಕುವಂತೆ ಒತ್ತಡ ಹಾಕುತ್ತಿರುವ ಮುಸ್ಲಿಂ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ 269 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಾ ವಿಕಾಸ ಆಘಾಡಿ (ಎಂವಿಎ) ಮತ್ತು ಇತರ ಬಿಜೆಪಿಯೇತರ ಪಕ್ಷಗಳನ್ನು ಬೆಂಬಲಿಸಲು ಸಂಘಟನೆ ನಿರ್ಧರಿಸಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪದಾಧಿಕಾರಿ ಮೌಲಾನಾ ಸಜ್ಜದ್ ನೊಮಾನಿ ತಿಳಿಸಿರುವುದಾಗಿ ಭಾಟಿಯಾ ಆರೋಪಿಸಿದ್ದಾರೆ.

ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯದ ಭವಿಷ್ಯದ ಮೇಲೆ ಮಾತ್ರವಲ್ಲದೆ ಇಡೀ ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಮಹಾ ವಿಕಾಸ ಆಘಾಡಿಗೆ ಮತ ಹಾಕುವಂತೆ ನೋಮಾನಿ ಮುಸ್ಲಿಮರಲ್ಲಿ ಮನವಿ ಮಾಡಿರುವುದಾಗಿ ಭಾಟಿಯಾ ದೂರಿದ್ದಾರೆ.

ಜಾರ್ಖಂಡ್‌ನಲ್ಲಿ ಕಾಂಗ್ರೆಸ್-ಜೆಎಂಎಂ-ಆರ್‌ಜೆಡಿ-ಸಿಪಿಐ (ಎಂಎಲ್) ಒಕ್ಕೂಟಕ್ಕೆ ಮತ ಹಾಕುವಂತೆ ಜಮಿಯತ್ ಉಲೇಮಾ-ಇ-ಹಿಂದ್‌ನ ಲೋಹರ್ದಗಾ ಘಟಕವು ಮುಸ್ಲಿಮರಿಗೆ ಮನವಿ ಮಾಡಿದೆ ಎಂದೂ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಎಂವಿಎ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟಗಳು ಮುಸ್ಲಿಂ ಸಂಸ್ಥೆಗಳನ್ನು ಬಳಸಿಕೊಂಡು ನಡೆಸುತ್ತಿರುವ ‘ವೋಟ್ ಜಿಹಾದ್’ ಇದಾಗಿದೆ. ಇದು ತುಷ್ಟೀಕರಣ ರಾಜಕೀಯದ ಪರಮಾವಧಿಯಾಗಿದ್ದು, ಧರ್ಮದ ಆಧಾರದ ಮೇಲೆ ಮತಕ್ಕಾಗಿ ಮನವಿ ಮಾಡುವುದು ಭ್ರಷ್ಟಾಚಾರಕ್ಕೆ ಸಮಾನವಾದದ್ದು ಎಂದು ಭಾಟಿಯಾ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.