ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶವು ‘ಇಂಡಿಯಾ’ ಮೈತ್ರಿಕೂಟದ ಮೇಲೆ ಯಾವುದೇ ಪರಿಣಾಮ ಬೀರದು. ಆದರೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಶಸ್ಸು ಗಳಿಸಬೇಕಾದರೆ ಇನ್ನಷ್ಟು ಪರಿಶ್ರಮ ಪಡಬೇಕಿದೆ ಎಂದು ವಿರೋಧ ಪಕ್ಷಗಳ ನಾಯಕರು ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ದೊರೆತ ಭರ್ಜರಿ ಗೆಲುವು, 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯ ಬಲ ವೃದ್ದಿಸಿದೆ. ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ದೊರೆತ ಗೆಲುವು ಅಲ್ಪ ಸಮಾಧಾನ ನೀಡಿದೆ.
ವಿಧಾನಸಭಾ ಚುನಾವಣೆ ಫಲಿತಾಂಶ ‘ಇಂಡಿಯಾ’ ಮೈತ್ರಿಕೂಟದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಫಾರೂಕ್ ಅಬ್ದುಲ್ಲಾ, ‘ಯಾವುದೇ ಪರಿಣಾಮ ಬೀರದು. ಆದರೆ ವಿಪಕ್ಷಗಳು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಬೇಕಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಆರ್‌ಜೆಡಿ ನಾಯಕ ಮನೋಜ್ ಝಾ ಅವರ ಅಭಿಪ್ರಾಯವೂ ಇದೇ ಆಗಿದೆ. ‘ಇದು ರಾಜ್ಯಗಳಲ್ಲಿ ನಡೆದಿರುವ ಚುನಾವಣೆ. ರಾಷ್ಟ್ರಮಟ್ಟದಲ್ಲಿ ನಡೆಯುವ (ಲೋಕಸಭೆ) ಚುನಾವಣೆಯ ವಿಷಯವೇ ಬೇರೆ ಆಗಿರುತ್ತದೆ. ಐದು ರಾಜ್ಯಗಳ ಚುನಾವಣೆಯ ಫಲಿತಾಂಶದಿಂದ ಮೈತ್ರಿಕೂಟದ ಮೇಲೆ ಪರಿಣಾಮ ಉಂಟಾಗದು’ ಎಂದಿದ್ದಾರೆ.
‘ಚುನಾವಣೆಯಲ್ಲಿ ಗೆದ್ದವರನ್ನು ಅಭಿನಂದಿಸುತ್ತೇನೆ. ಮೂರು ರಾಜ್ಯಗಳಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಆತ್ಮಾವಲೋಕನ ಮಾಡಲಾಗುವುದು‘ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವಣ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮೈತ್ರಿಕೂಟದಲ್ಲಿ ಯಾವುದೇ ಒಡಕು ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎಲ್ಲ ವಿಪಕ್ಷಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು’ ಎಂದರು.
‘ಏನಾದರೂ ದೂರುಗಳಿದ್ದರೆ ಅದನ್ನು ಹೇಳುವ ಅಧಿಕಾರ ಎಲ್ಲರಿಗೂ ಇದೆ. ಗಂಭೀರವಾದ ದೂರುಗಳಿದ್ದರೆ ಅವುಗಳನ್ನು ಪರಿಶೀಲಿಸಿ, ತಪ್ಪು ಸರಿಪಡಿಸಲಾಗುವುದು’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.