ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ತೆರವಾಗಿದ್ದ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಇತ್ತೀಚಿನ ವರದಿ ಬಂದಾಗ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, 6ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಹಾಗೂ ಸ್ವತಂತ್ರ ಅಭ್ಯರ್ಥಿ ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ, ಎಎಪಿ ಅಭ್ಯರ್ಥಿಗಳಾದ ಮೊಹಿಂದರ್ ಭಗತ್ ಅವರು ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಿಂದ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖವೀಂದರ್ ಸಿಂಗ್ ಅವರ ಪತ್ನಿ ಕಮಲೇಶ್ ಠಾಕೂರ್ ಹಾಗೂ ಪಶ್ಚಿಮ ಬಂಗಾಳದ ರಾಯ್‌ಗಂಜ್‌ನಿಂದ ಟಿಎಂಸಿ ಅಭ್ಯರ್ಥಿ ಕೃಷ್ಣ ಕಲ್ಯಾಣಿ ಗೆಲುವು ದಾಖಲಿಸಿದ್ದಾರೆ.
ಪಂಜಾಬ್, ಹಿಮಾಚಲಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತೆರವಾಗಿದ್ದ ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ಬುಧವಾರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಎಪಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಒಳಗೊಂಡ ಇಂಡಿಯಾ ಒಕ್ಕೂಟವು ಮುನ್ನಡೆ ಕಾಯ್ದುಕೊಂಡಿದೆ.
ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಭಗತ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶೀತಲ್ ಅಂಗೂರಲ್ ಅವರನ್ನು 37 ಸಾವಿರ ಮತಗಳಿಂದ ಪರಾಭವಗೊಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಅಂಗೂರಲ್ ಅವರು ಎಎಪಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಇಲ್ಲಿ ಉಪಚುನಾವಣೆ ಘೋಷಣೆಯಾಗಿತ್ತು.
ತಮಿಳುನಾಡಿನ ವಿಕ್ರವಂಡಿ ಕ್ಷೇತ್ರದಲ್ಲಿ ಡಿಎಂಕೆಯ ಅನ್ನಿಯೂರ್ ಶಿವಾ ಅವರು ಪಿಎಂಕೆ ಪಕ್ಷದ ಸಿ. ಅನ್ಬುಮಣಿ ಅವರ ವಿರುದ್ಧ 39 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾಯ್‌ಗಂಜ್ ಕ್ಷೇತ್ರದಲ್ಲಿ ಟಿಎಂಸಿಯ ಕಲ್ಯಾಣಿ ಅವರು ಬಿಜೆಪಿಯ ಮಾನಸ್ ಕುಮಾರ್ ಘೋಷ್ ವಿರುದ್ಧ 50 ಸಾವಿರ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 4 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ರಾಣಾಘಾಟ್ ದಕ್ಷಿಣ, ಬಾಗ್ದಾ ಹಾಗೂ ಮಣಿಕ್ತಾಲಾ ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾಣಾಘಾಟ್‌ನಲ್ಲಿ ಬಿಜೆಪಿ ಅಭ್ಯರ್ಥಿ 31 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಬಾಗ್ದಾನಲ್ಲಿ 33 ಸಾವಿರ ಮತ ಹಾಗು ಮಣಿಕ್ತಾಲಾದಲ್ಲಿ 34 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಹಿಂದಿದ್ದಾರೆ ಎಂಬ ಮಾಹಿತಿ ಚುನಾವಣಾ ಆಯೊಗದ ಅಂತರ್ಜಾಲ ತಾಣದಿಂದ ಲಭ್ಯವಾಗಿದೆ.
ಹಿಮಾಚಲ ಪ್ರದೇಶದ ಡೇಹ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಮಲೇಶ್ ಠಾಕೂರ್ ಅವರು ಬಿಜೆಪಿಯ ಹೋಷಿಯಾರ್ ಸಿಂಗ್ ಅವರನ್ನು 9 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಇದೇ ರಾಜ್ಯದಲ್ಲಿನ ಇನ್ನಿತರ ಎರಡು ಕ್ಷೇತ್ರಗಳ ಪೈಕಿ, ಒಂದರಲ್ಲಿ ಕಾಂಗ್ರೆಸ್ ಹಾಗೂ ಮತ್ತೊಂದರಲ್ಲಿ ಬಿಜೆಪಿ ಮುಂದಿದೆ.
ಉತ್ತರಾಖಂಡದ ಬದರಿನಾಥ ಹಾಗೂ ಮಂಗ್ಳೌರ್ ಕ್ಷೇತ್ರಗಳಲ್ಲಿ ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ. ಮಧ್ಯಪ್ರದೇಶದ ಅಮರವಾಡ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಹಾರದಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಜೆಡಿಯು ಅಭ್ಯರ್ಥಿ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.