ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.ಈ ಐದು ರಾಜ್ಯಗಳಲ್ಲಿ ಮೋದಿ ಹವಾ ಪ್ರಭಾವ ಬೀರಬಹುದು ಎಂದು ಬಿಜೆಪಿ ನಿರೀಕ್ಷಿಸಿದ್ದರೂ ಅದು ನಿರೀಕ್ಷೆಯಾಗಿಯೇ ಉಳಿದು ಬಿಟ್ಟಿತು. ಚಾಣಾಕ್ಷತನದಿಂದ ಕಾರ್ಯತಂತ್ರ ರೂಪಿಸಿದ್ದರೂ ಬಿಜೆಪಿಗೆಹೊಡೆತವುಂಟಾಗಲು ಹಲವಾರು ಕಾರಣಗಳಿವೆ. ಅದರಲ್ಲಿ ಸಾಮಾಜಿಕ ಮಾಧ್ಯಮವೂ ಒಂದು.
ಚುನಾವಣೆಗಳಲ್ಲಿ ಬಿಜೆಪಿ ಸಾಮಾಜಿಕ ಮಾಧ್ಯಮಗಳನ್ನೂ ಅಸ್ತ್ರವಾಗಿರಿಸಿಕೊಂಡಿದ್ದವು. ಸ್ಮಾರ್ಟ್ ಫೋನ್ ಆ್ಯಪ್, ಫೇಸ್‍ಬುಕ್ ಪುಟ, ವಾಟ್ಸ್ ಆ್ಯಪ್ ಸಂದೇಶಗಳ ಮೂಲಕ ಬಿಜೆಪಿ ಡಿಜಿಟಲ್ ಪ್ರಚಾರವನ್ನು ಬಿರುಸಿನಿಂದಲೇ ಮಾಡಿತ್ತು.ಆದರೆ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ತಲುಪಿಸಲು ಬಿಜೆಪಿಗೆ ವಿಫಲವಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾದ ಪ್ರಚಾರ
ಕಳೆದ ಒಂದು ವರ್ಷದಲ್ಲಿ ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ಫೇಸ್‍ಬುಕ್, ವಾಟ್ಸ್ ಆ್ಯಪ್ ಮತ್ತು ಟ್ವಿಟರ್ ಪೋಸ್ಟ್ ಗಳ ಮೇಲೆ ಕೆಲವೊಂದುನಿರ್ಬಂಧಗಳನ್ನು ಹೇರಲಾಗಿತ್ತು. ಚುನಾವಣಾ ಆಯೋಗ ವಾಟ್ಸ್ ಆ್ಯಪ್ ಮತ್ತು ಫೇಸ್‍ಬುಕ್ ಮೇಲೆ ನಿಗಾ ಇರಿಸಿತ್ತು. ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ಯಾವ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿವೆ ಎಂಬುದನ್ನು ನಿಗಾ ಇರಿಸಲು ಜೂಕರ್ ಬರ್ಗ್ ಪ್ರತ್ಯೇಕ ವಾರ್ ರೂಂ ಆರಂಭಿಸಿದ್ದರು. ಮುಂಬರುವ ಚುನಾವಣೆಗಳಲ್ಲಿಫೇಸ್‍ಬುಕ್ ಮೂಲಕ ನಡೆಯುವ ಅನಧಿಕೃತ ಪ್ರಚಾರಕ್ಕೆ ಆಸ್ಪದ ನೀಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದಾಗ, ಫೇಸ್‌ಬುಕ್ ಕೂಡಾ ಇದಕ್ಕೆ ಕೈ ಜೋಡಿಸಿತ್ತು.ಇದು ಬಿಜೆಪಿ ಪ್ರಚಾರದ ಮೇಲೆ ಪ್ರಭಾವ ಬೀರಿತ್ತು.ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಅತಿಯಾಗಿ ಬಳಸಿದ ಪಕ್ಷ ಬಿಜೆಪಿ ಆಗಿತ್ತು.ಚುನಾವಣೆ ಗೆಲ್ಲಲು ಮಾಹಿತಿ ಖರೀದಿಯನ್ನೂ ರಾಜಕೀಯ ಪಕ್ಷಗಳು ಮಾಡಿದ್ದವು.ಆದರೆ ಮಾಹಿತಿ ಸೋರಿಕೆ ವಿವಾದಕ್ಕೀಡಾದಾಗ ಫೇಸ್‌ಬುಕ್ ಇದಕ್ಕೆ ಕಡಿವಾಣ ಹಾಕಿತು.
ಫೇಸ್‍ಬುಕ್ ಪೋಸ್ಟ್ ಗಳಿಗೆ ನಿಯಂತ್ರಣ
ಕಳೆದ ಒಂದು ವರ್ಷದಿಂದ ಫೇಸ್ ಬುಕ್ ನ್ಯೂಸ್ ಫೀಡ್ ನಲ್ಲಿಯೂ ಭಾರೀ ಬದಲಾವಣೆ ಕಂಡುಬಂದಿದೆ.ಫೇಸ್‌ಬುಕ್ ನ ವೈರಲ್ ಪೋಸ್ಟ್ ಗಳನ್ನು ನಿಗಾ ಇರಿಸಿ ಅವುಗಳ ಮೇಲೆ ನಿಯಂತ್ರಣ ಹೇರಿದ್ದು ಬಿಜೆಪಿಗೆ ಹೊಡೆತ ಆಗಿತ್ತು. ಹೀಗಾಗಿ ಅಂಥಾ ಪೋಸ್ಟ್ ಗಳ ರೀಚ್ ಕಡಿಮೆ ಆಯಿತು. ರೀಚ್ ಕಡಿಮೆ ಆದ ಕೂಡಲೇ ರಾಜಕೀಯ ಪಕ್ಷಗಳು ಯುವ ಜನರನ್ನು ಪೋಸ್ಟ್ ಮೂಲಕ ತಲುಪುವುದಕ್ಕೂ ಅಡ್ಡಿಯಾಯಿತು.ಪ್ರತಿಯೊಂದು ಚುನಾವಣಾ ಕ್ಷೇತ್ರಕ್ಕೊಂದು ಫೇಸ್‍ಬುಕ್ ಪುಟ, ವಾಟ್ಸ್ ಆ್ಯಪ್ ಗ್ರೂಪ್ ಗಳಿದ್ದರೂ ಪೋಸ್ಟ್ ಗಳರೀಚ್ ಕಡಿಮೆಯೇ ಇತ್ತು. ರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರ ಅಧಿಕೃತ ಫೇಸ್‍ಬುಕ್ ಪುಟಕ್ಕೆ ಸಿಗುತ್ತಿದ್ದ ಲೈಕುಗಳ ಸಂಖ್ಯೆ, ಶೇರ್ ಮತ್ತು ಕಾಮೆಂಟ್‍ಗಳ ಸಂಖ್ಯೆಯೂ ಕಳೆದ ವರ್ಷದಿಂದ ಕಡಿಮೆ ಆಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಫೇಸ್‍ಬುಕ್ ಪ್ರಚಾರ ಕಾರ್ಯ ಇಲ್ಲಿ ವಿಫಲವಾಗಿತ್ತು.
ವಾಟ್ಸ್ಆ್ಯಪ್‍ಗೂ ಕಡಿವಾಣ
ಒಂದು ವರ್ಷದ ಹಿಂದೆ ವಾಟ್ಸ್ಆ್ಯಪ್‍ನಲ್ಲಿ ಏನು ಬೇಕಾದರೂ ಬರೆದು ಫಾರ್ವರ್ಡ್ ಮಾಡಬಹುದಾಗಿತ್ತು.ಒಂದೇ ಒಂದು ಟಚ್ ಮೂಲಕ ಹಲವಾರು ಗ್ರೂಪ್‍ಗಳಿಗೆ ಒಟ್ಟಿಗೆ ಸಂದೇಶ ಕಳುಹಿಸಬಹುದಾಗಿತ್ತು. ಆದರೆ ಇದಕ್ಕೆ ನಿಯಂತ್ರಣವೇರ್ಪಟ್ಟಾಗ ಒಂದು ಬಾರಿ ಐದು ಜನರಿಗೆ ಮಾತ್ರ ಸಂದೇಶ ಫಾರ್ವರ್ಡ್ ಮಾಡುವಂತಾಯಿತು.ಈ ನಿಯಂತ್ರಣ ಕೂಡಾ ಬಿಜೆಪಿ ಪಕ್ಷದ ಮೇಲೆ ಪರಿಣಾಮ ಬೀರಿತು.ಚುನಾವಣೆಯ ಸಿದ್ಧತೆಗಾಗಿ ಅಮಿತ್ ಶಾ ಪ್ರತಿ ವಾರ್ಡ್ ಅಥವಾ ಚುನಾವಣಾ ಕ್ಷೇತ್ರಕ್ಕೆ ವಾಟ್ಯ್ಆ್ಯಪ್ ಗ್ರೂಪ್ ಮಾಡಬೇಕೆಂದು ಹೇಳಿದ್ದರು. ಈ ನಿಯಂತ್ರಣ ಕಾರ್ಯಗತವಾದಾಗ ವಾಟ್ಸ್ಆ್ಯಪ್ ಗ್ರೂಪ್ ಚಟುವಟಿಕೆಯಲ್ಲಿಯೂ ಗಣನೀಯ ಇಳಿಕೆ ಕಂಡು ಬಂತು.
ಗುರಿ ತಪ್ಪಿದ ಅಮಿತ್ ಶಾ ಟಾರ್ಗೆಟ್
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಆರಂಭವಾಗುವ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಟಾರ್ಗೆಟ್ ಇಟ್ಟಿದ್ದರು. ಎಲ್ಲ ಸಂಸದರಿಗೆ ಫೇಸ್‍ಬುಕ್ ಪುಟ ಬೇಕು, ಅದಕ್ಕೆ ಕನಿಷ್ಠ ಮೂರು ಲಕ್ಷ ನಿಜವಾದ ಲೈಕ್ ಬೇಕು, ಈ ಗುರಿ ಮುಟ್ಟಿದರೆ ಆ ಸಂಸದರ ಕ್ಷೇತ್ರದ ಕಾರ್ಯಕರ್ತರಲ್ಲಿ ಮೋದಿ ವಿಡಿಯೊ ಕರೆ ಮೂಲಕ ಸಂವಹನ ನಡೆಸುತ್ತಾರೆ. ಸರ್ಕಾರದ ಜನಪರ ಯೋಜನೆಗಳು ಜನರಿಗೆ ತಲುಪಬೇಕು. ವಿಪಕ್ಷಗಳ ಸುಳ್ಳು ಪ್ರಚಾರಗಳನ್ನು ತಡೆಯಬೇಕು. ಅದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಎಂದಿದ್ದರು ಮೋದಿ, ಆದರೆ ಶಾ-ಮೋದಿಯವರ ಈ ಗುರಿ ತಪ್ಪಿತ್ತು.
ಕರ್ನಾಟಕದ ತಂತ್ರ ಇಲ್ಲಿ ಫಲಿಸಲಿಲ್ಲ
ಕರ್ನಾಟಕದಲ್ಲಿ ಬಿಜೆಪಿಮುನ್ನಡೆ ಸಾಧಿಸಿದಾಗ ಭಾರತದಲ್ಲಿನ ಮೊದಲ ವಾಟ್ಸ್ಆ್ಯಪ್ ಚುನಾವಣೆಯಲ್ಲಿಗೆಲುವು ಎಂದು ವಿದೇಶಿ ಸುದ್ದಿಮಾಧ್ಯಮಗಳು ಬಿಂಬಿಸಿದ್ದವು.ಆದರೆ ಈ ಐದು ರಾಜ್ಯಗಳಲ್ಲಿ ವಾಟ್ಸ್ಆ್ಯಪ್ ತಂತ್ರ ಫಲಿಸಲಿಲ್ಲ.ಗ್ರಾಮಗಳಿಗೂ ಇಂಟರ್ನೆಟ್ ಸೇವೆ ಲಭಿಸಿದ್ದರೂ ಪ್ರಚಾರ ಪೋಸ್ಟ್ ಗಳು ಗ್ರಾಮೀಣರಿಗೆ ತಲುಪಲಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆ ಎದುರಿಸಲು ಒಂದು ಲಕ್ಷದಷ್ಟು ವಾಟ್ಸ್ಆ್ಯಪ್ ಗ್ರೂಪ್‍ಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಕ್ರಿಯೇಟ್ ಮಾಡಿತ್ತು.ಚುನಾವಣಾ ಆಯೋಗಕ್ಕೂ ಕೂಡಾ ನಿಯಂತ್ರಿಸಲು ಅಸಾಧ್ಯ ಎಂಬಂತೆ ವಾಟ್ಸ್ಆ್ಯಪ್‍ನಲ್ಲಿ ಚುನಾವಣಾ ಪ್ರಚಾರ ನಡೆದಿತ್ತು.ಇದಾದ ನಂತರ ಇಂಥಾ ಪ್ರಚಾರಗಳಿಗೆ ಚುನಾವಣಾ ಆಯೋಗ ನಿಯಂತ್ರಣವೇರ್ಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.