ADVERTISEMENT

ಹವಾಮಾನ ಬದಲಾವಣೆ ಸೂಚ್ಯಂಕ: 8ನೇ ಸ್ಥಾನಕ್ಕೇರಿದ ಭಾರತ

ಪಿಟಿಐ
Published 15 ನವೆಂಬರ್ 2022, 15:55 IST
Last Updated 15 ನವೆಂಬರ್ 2022, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತವು 2023ನೇ ಸಾಲಿನ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (ಸಿಸಿಪಿಐ) ಎಂಟನೇ ಸ್ಥಾನಕ್ಕೇರಿದೆ.

ಇಂಧನಗಳ ಗರಿಷ್ಠ ಬಳಕೆ, ಹಸಿರುಮನೆ ಅನಿಲದ ಹೊರಸೂಸುವಿಕೆಯ ತಗ್ಗಿಸುವಿಕೆ ಹಾಗೂ ಇನ್ನಿತರ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ಪಟ್ಟಿಯಲ್ಲಿ ಭಾರತವು ಎರಡು ಸ್ಥಾನ ಪ್ರಗತಿ ಕಂಡಿದೆ ಎಂದು ಸೋಮವಾರ ಪ್ರಕಟಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ.

2030ರ ವೇಳೆಗೆ ಹಸಿರುಮನೆ ಅನಿಲದ ಹೊರಸೂಸುವಿಕೆಯನ್ನು ಅರ್ಧಕ್ಕೆ ತಗ್ಗಿಸುವ ದಿಸೆಯಲ್ಲಿ ರಾಷ್ಟ್ರಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದರ ಆಧಾರದಲ್ಲಿ ಜರ್ಮನ್‌ವಾಚ್‌, ನ್ಯೂಕ್ಲೈಮೇಟ್‌ ಇನ್‌ಸ್ಟಿಟ್ಯೂಟ್‌ ಮತ್ತು ಕ್ಲೈಮೇಟ್ ಆ್ಯಕ್ಷನ್‌ ನೆಟ್ವರ್ಕ್‌ ಎಂಬ ಸರ್ಕಾರೇತರ ಸಂಸ್ಥೆಗಳು ಈ ವರದಿ ಸಿದ್ಧಪಡಿಸಿವೆ.

ADVERTISEMENT

‘ಎಲ್ಲಾ ಸೂಚ್ಯಂಕ ವಿಭಾಗಗಳಲ್ಲಿ ಯಾವ ರಾಷ್ಟ್ರವೂ ಉತ್ತಮ ಸಾಮರ್ಥ್ಯ ತೋರಿಲ್ಲ. ಹೀಗಾಗಿ ಪಟ್ಟಿಯಲ್ಲಿನ ಮೊದಲ ಮೂರು ಸ್ಥಾನಗಳನ್ನು ಖಾಲಿ ಬಿಡಲಾಗಿದೆ. ಡೆನ್ಮಾರ್ಕ್‌ ನಾಲ್ಕನೇ ಸ್ಥಾನದಲ್ಲಿದ್ದು, ಸ್ವೀಡನ್‌ ಹಾಗೂ ಚಿಲಿ ದೇಶಗಳು ಕ್ರಮವಾಗಿ 5 ಮತ್ತು 6ನೇ ಸ್ಥಾನಗಳನ್ನು ಪಡೆದಿವೆ’ ಎಂದು ತಿಳಿಸಲಾಗಿದೆ.

‘ಭಾರತವು ಹಸಿರುಮನೆ ಅನಿಲ ಹೊರಸೂಸುವಿಕೆ ಹಾಗೂ ಇಂಧನ ಬಳಕೆ ವಿಭಾಗಗಳಲ್ಲಿ ಗರಿಷ್ಠ ರೇಟಿಂಗ್‌ ಪಡೆದಿದೆ. ಆದರೆ ಹವಾಮಾನ ನೀತಿ ಹಾಗೂ ನವೀಕರಿಸಬಹುದಾದ ಇಂಧನ ವಿಭಾಗಗಳಲ್ಲಿ ಮಧ್ಯಮ ರೇಟಿಂಗ್‌ ಹೊಂದಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಜಗತ್ತಿನ ದೊಡ್ಡ ಮಾಲಿನ್ಯಕಾರಕ ರಾಷ್ಟ್ರ ಎನಿಸಿರುವ ಚೀನಾ ಈ ಪಟ್ಟಿಯಲ್ಲಿ 13 ಸ್ಥಾನ ಕುಸಿತ ಕಂಡಿದೆ. ಒಟ್ಟಾರೆ ಅತಿ ಕಡಿಮೆ ರೇಟಿಂಗ್‌ ಹೊಂದಿರುವ ಈ ರಾಷ್ಟ್ರ 51ನೇ ಸ್ಥಾನದಲ್ಲಿದೆ. ಅಮೆರಿಕವು 52ನೇ ಸ್ಥಾನ ತನ್ನದಾಗಿಸಿಕೊಂಡಿದೆ. ಈ ದೇಶ ಪಟ್ಟಿಯಲ್ಲಿ ಮೂರು ಸ್ಥಾನ ಮೇಲೇರಿದೆ. ಕಜಕಸ್ಥಾನ (61), ಸೌದಿ ಅರೇಬಿಯಾ (62) ಹಾಗೂ ಇರಾನ್‌ (63) ಅಂತಿಮ ಮೂರು ಸ್ಥಾನಗಳಲ್ಲಿವೆ’ ಎಂದು ತಿಳಿಸಲಾಗಿದೆ.

‘ಭಾರತವು ಅನಿಲ ಹೊರಸೂಸುವಿಕೆ ಸಂಬಂಧಿತ ಗುರಿ ಸಾಧನೆಯ ಹಾದಿಯಲ್ಲಿದೆ. ಆದರೆ ನವೀಕರಿಸಬಹುದಾದ ಇಂಧನದ ವಿಚಾರದಲ್ಲಿ ನಿಗದಿತ ಗುರಿ ತಲುಪಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.