ADVERTISEMENT

3 ದೋಣಿಗಳಲ್ಲಿ ತೆರಳುತ್ತಿದ್ದ 300 ವಲಸಿಗರು ನಾಪತ್ತೆ

ಎಪಿ
Published 10 ಜುಲೈ 2023, 13:25 IST
Last Updated 10 ಜುಲೈ 2023, 13:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡಾಕರ್: ಪಶ್ಚಿಮ ಆಫ್ರಿಕಾದ ಸೆನೆಗಲ್‌ನಿಂದ ಸ್ಪೇನ್‌ಗೆ ಮೂರು ದೋಣಿಗಳಲ್ಲಿ ತೆರಳುತ್ತಿದ್ದ ಸುಮಾರು 300 ಮಂದಿ ವಲಸಿಗರು ನಾಪತ್ತೆಯಾಗಿದ್ದಾರೆ ಎಂದು ಸ್ಪ್ಯಾನಿಷ್‌ನ ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

100 ಪ್ರಯಾಣಿಕರಿದ್ದ ಎರಡು ದೋಣಿಗಳು ಬೌರ್‌ ನಗರದಿಂದ ಜೂನ್‌ 23ರಂದು ಹಾಗೂ 200 ಪ್ರಯಾಣಿಕರಿದ್ದ 3ನೇ ದೋಣಿ ಕಫೌಂಟೈನ್‌ ಪಟ್ಟಣದಿಂದ ಜೂನ್ 27ರಂದು ನಿರ್ಗಮಿಸಿತ್ತು ಎಂದು ಅಧಿಕಾರಿ ಹೆಲೆನಾ ಮಲೆನೊ ಗಾರ್ಜನ್‌ ಅವರು ತಿಳಿಸಿದ್ದಾರೆ.  

‘ಹಲವರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಇವರ ಪತ್ತೆ ಕಾರ್ಯ ಮುಖ್ಯವಾಗಿದೆ. ಇವರುಗಳ ಶೋಧ ಕಾರ್ಯಕ್ಕಾಗಿ ನಮಗೆ ಹೆಚ್ಚಿನ ವಿಮಾನಗಳ ಅಗತ್ಯವಿದೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ADVERTISEMENT

ಪ್ರಯಾಣ ಆರಂಭಿಸಿದ ನಂತರ ಈ ದೋಣಿಗಳ ಜೊತೆಗಿನ ಸಂಪರ್ಕ ಕಡಿದುಹೋಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ಪೇನ್‌ ಮತ್ತು ಸೆನೆಗಲ್‌ ಆಡಳಿತ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಂಟ್ಲಾಂಟಿಕ್ ಸಮುದ್ರದ ಈ ಮಾರ್ಗವು ವಿಶ್ವದಲ್ಲಿಯೇ ಅತಿ ಅಪಾಯಕಾರಿಯಾದ ಮಾರ್ಗವಾಗಿದೆ. ಪ್ರತಿ ವರ್ಷ ಮೊದಲಾರ್ಧದಲ್ಲಿ ಕನಿಷ್ಠ 800 ಮಂದಿ ನಾಪತ್ತೆಯಾಗುತ್ತಾರೆ ಎಂದು ರಕ್ಷಣಾ ಪಡೆ ‘ವಾಕಿಂಗ್ ವಾರ್ಡರ್ಸ್’ ಪ್ರತಿಕ್ರಿಯಿಸಿದೆ.

ಇತ್ತೀಚಿನ ವರ್ಷಗಳಲ್ಲಿ ವಲಸಿಗರು ಸ್ಪೇನ್‌ಗೆ ಕ್ಯಾನರಿ ದ್ವೀಪಗಳ ಮೂಲಕ ಪ್ರಯಾಣಿಸುವುದು ಸಾಮಾನ್ಯವಾಗಿದೆ. 2020ರಲ್ಲಿ ಗರಿಷ್ಠ ಅಂದರೆ ಸುಮಾರು 23 ಸಾವಿರ ವಲಸಿಗರು ದ್ವೀಪವನ್ನು ಪ್ರವೇಶಿಸಿದ್ದರು. ಈ ವರ್ಷ ಮೊದಲ ಆರು ತಿಂಗಳಲ್ಲಿ 7,000ಕ್ಕೂ ಅಧಿಕ ವಲಸಿಗರು ಅಥವಾ ನಿರಾಶ್ರಿತರು ಕ್ಯಾನರಿ ದ್ವೀಪ ಪ್ರದೇಶವನ್ನು ತಲುಪಿದ್ದಾರೆ ಎಂದು ಸ್ಪೇನ್‌ನ ಗೃಹ ಸಚಿವಾಲಯವು ಪ್ರತಿಕ್ರಿಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.