ಜೈಪುರ (ಪಿಟಿಐ): ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳು ಬರೀ ಶ್ರೀಮಂತರಿಗಷ್ಟೇ ಲಾಭದಾಯಕಯಾಗಿವೆಯೇ ಹೊರತು ಬಡವರಿಗಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಟೋಂಕ್ ಜಿಲ್ಲೆಯ ನಿವಾಯಿಯಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ಅವರು ವಿದೇಶ ಪ್ರವಾಸ ಹೋಗುತ್ತಾರೆ ಮತ್ತು ಅಲ್ಲಿ ತಮ್ಮ ಉದ್ಯಮಿ ಸ್ನೇಹಿತರಿಗಾಗಿ ಒಪ್ಪಂದಗಳನ್ನು ಮಾಡಿಕೊಂಡು ಬರುತ್ತಾರೆ’ ಎಂದೂ ಆರೋಪಿಸಿದ್ದಾರೆ.
‘ವಿದೇಶಕ್ಕೆ ತೆರಳಿ ವಾಪಸ್ ಬರುವ ಮೋದಿ, ನಮ್ಮ ಗೌರವ ಹೆಚ್ಚಿದೆ ಎಂದು ಹೇಳುತ್ತಾರೆ. ಬಳಿಕ ಅವರು ತಮ್ಮ ಉದ್ಯಮಿ ಸ್ನೇಹಿತರಿಗಾಗಿ ಒಪ್ಪಂದಗಳನ್ನು ಮಾಡಿಕೊಂಡು ಬಂದಿದ್ದಾರೆ ಎಂಬುದು ನಮಗೆ ತಿಳಿದು ಬರುತ್ತದೆ. ಅಂತೆಯೇ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಅಲ್ಲಿಂದಲೇ ವ್ಯಾಪಾರ ಕುದುರುತ್ತದೆ. ಜನರ ಹಿತಾಸಕ್ತಿಗಳಿಗಿಂತಲೂ ಪ್ರಧಾನಿ ಉದ್ಯಮಿ ಸ್ನೇಹಿತರ ಹಿತಾಸಕ್ತಿಯತ್ತಲೇ ತಮ್ಮೆಲ್ಲ ಗಮನವವನ್ನು ಹರಿಸುತ್ತಾರೆ’ ಎಂದೂ ದೂರಿದ್ದಾರೆ.
‘ಬಡವರು ಮತ್ತು ಮಧ್ಯಮ ವರ್ಗದವರನ್ನು ನಿರ್ಲಕ್ಷಿಸಲಾಗಿದ್ದರೂ, ಅಧಿಕಾರದಲ್ಲಿರುವುದೇ ಬಿಜೆಪಿಯ ಏಕೈಕ ಗುರಿಯಾಗಿದೆ’ ಎಂದೂ ಅವರು ಆರೋಪಿಸಿದ್ದಾರೆ.
ದೆಹಲಿಯಲ್ಲಿನ ಜಿ20 ಶೃಂಗಸಭೆಯ ಸ್ಥಳವು ಮಳೆಯಿಂದ ಜಲಾವೃತವಾಗಿರುವುದನ್ನು ಉಲ್ಲೇಖಿಸಿದ ಪ್ರಿಯಾಂಕಾ, ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡರು. ‘ಬಹುಶಃ ನಮ್ಮ ದೇಶದ ಜನರು ಭಯದಿಂದ ಏನೂ ಹೇಳಲು ಸಾಧ್ಯವಾಗುತ್ತಿಲ್ಲ. ‘ದೇವರು ಹೇಳಿದ್ದಾನೆ: ‘ನಿಮ್ಮ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳಿ. ಈ ದೇಶವು ನಿಮ್ಮನ್ನು ನಾಯಕನನ್ನಾಗಿ ಮಾಡಿದೆ, ದೇಶವನ್ನು ಮೊದಲು ಪರಿಗಣಿಸಿ, ಜನರ ಸ್ಥಿತಿಯನ್ನು ಉತ್ತಮವನ್ನಾಗಿ ಮಾಡಿ’ ಎಂದೂ ಅವರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.