ನವದೆಹಲಿ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಭಿನ್ನಸಿದ್ಧಾಂತಗಳಲ್ಲಿ ನಂಬಿಕೆ ಇರಿಸಿದ್ದವರನ್ನು ಒಗ್ಗೂಡಿಸಿ, ಅಧಿಕಾರ ನಡೆಸಿದ್ದರು ಎಂದು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಹೇಳಿದ್ದಾರೆ.
ಇಂದು (ಡಿ.25) ವಾಜಪೇಯಿ ಅವರ ಜನ್ಮದಿನ. ಇದರ ಅಂಗವಾಗಿ ವಾಜಪೇಯಿ ಕುರಿತು ಮಾತನಾಡಿರುವ ಜೋಶಿ, 'ಅಟಲ್ ಅವರು 22–23 ಪಕ್ಷಗಳನ್ನು ಒಗ್ಗೂಡಿಸಿ, ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರವಾಗಿ ರೂಪಿಸಿದ್ದರು. ವಿವಿಧ ಸಿದ್ಧಾಂತಗಳಲ್ಲಿ ನಂಬಿಕೆ ಹೊಂದಿರುವವರನ್ನು ಇಟ್ಟುಕೊಂಡು, ಎಲ್ಲ ಭಿನ್ನತೆಗಳನ್ನು ಕಳಚಿ ಭಾರತದ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸಿದ್ದರು' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಟಲ್ ಜನ್ಮದಿನವನ್ನು ದೇಶದಲ್ಲಿ 'ಉತ್ತಮ ಆಡಳಿತ ದಿನ'ವಾಗಿ ಆಚರಿಸಲಾಗುತ್ತದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರ ರಾಜಧಾನಿಯಲ್ಲಿರುವ ಅಟಲ್ ಸಮಾಧಿ ಸ್ಥಳ 'ಸದೈವ ಅಟಲ್'ಗೆ ತೆರಳಿಇಂದು ನಮನ ಸಲ್ಲಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಮತ್ತು ಇನ್ನಿತರ ನಾಯಕರೂ ಭಾಗಿಯಾದರು.
ಬಳಿಕ ಟ್ವೀಟ್ ಮಾಡಿರುವ ಮೋದಿ,'ಅಟಲ್ ಜೀ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರು ದೇಶಕ್ಕೆ ನೀಡಿದ ಅಪಾರ ಸೇವೆಯೇ ನಮಗೆ ಸ್ಫೂರ್ತಿ. ಭಾರತವನ್ನು ಸದೃಢ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ತಮ್ಮ ಬದುಕನ್ನೇ ಮುಡಿಪಾಗಿರಿಸಿದರು. ಅವರ ಅಭಿವೃದ್ಧಿ ಪರ ಕಾರ್ಯಗಳು ಲಕ್ಷಾಂತರ ಭಾರತೀಯರನ್ನು ಧನಾತ್ಮಕವಾಗಿ ಪ್ರಭಾವಿಸಿವೆ' ಎಂದು ಉಲ್ಲೇಖಿಸಿದ್ದಾರೆ.
ವಾಜಪೇಯಿ 1998ರಿಂದ 2004ರ ವರೆಗೆ ಅಧಿಕಾರದಲ್ಲಿದ್ದಎನ್‌ಡಿಎ ನೇತೃತ್ವದ ಸರ್ಕಾರವನ್ನು ಮುನ್ನಡೆಸಿದ್ದರು. ಅದರೊಂದಿಗೆ ಅವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಬಿಜೆಪಿಯ ಮೊದಲ ನಾಯಕ ಎನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.