ಬೆಂಗಳೂರು: ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ‘ಜೈ ಜವಾನ್, ಜೈ ಕಿಸಾನ್’ ಎಂದು ಘೋಷಿಸುವ ಮೂಲಕ ದೇಶದಲ್ಲಿ ಯೋಧರಷ್ಟೇ ರೈತರೂ ಮುಖ್ಯ ಎಂದು ಪ್ರತಿಪಾದಿಸಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಜೈ ವಿಜ್ಞಾನ್’ ಎಂಬ ಪದವನ್ನೂ ಸೇರಿಸಿದರು.
ಈ ಮೂಲಕ ಅವರು ವಿಜ್ಞಾನದ ಮಹತ್ವ ಸಾರಿದರು. ಯೋಧ ಮತ್ತು ರೈತರಜೊತೆಗೆ ವಿಜ್ಞಾನಿಯೂ ದೇಶದಲ್ಲಿ ಅತಿ ಮುಖ್ಯ ಎಂಬುದು ಅವರ ನುಡಿಗಟ್ಟಿನ ಕಳಕಳಿಯಾಗಿತ್ತು. ಅಟಲ್‌ತಮ್ಮ ಆಡಳಿತಾವಧಿಯಲ್ಲಿ ವಿಜ್ಞಾನ ಕ್ಷೇತ್ರಕ್ಕೂ ಪ್ರಾಮುಖ್ಯತೆ ನೀಡಿದ್ದರು.
ಅಮೆರಿಕ ಸೇರಿದಂತೆ ಜಗತ್ತಿನ ಅನೇಕ ಪ್ರಮುಖ ರಾಷ್ಟ್ರಗಳು ಭಾರತ ಅಣ್ವಸ್ತ್ವ ಪರೀಕ್ಷೆ ನಡೆಸಲು ವಿರೋಧ ವ್ಯಕ್ತಪಡಿಸುತ್ತಿದ್ದವು. ಅಂಥ ಎಲ್ಲ ವಿರೋಧಗಳಿಗೂ ಎದೆಗೊಟ್ಟು ನಿಂತ ವಾಜಪೇಯಿ ಅವರು, 1998ರಲ್ಲಿ ಪೋಕ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿಯೇಬಿಟ್ಟರು. 'ನಮ್ಮಲ್ಲಿ ಬಹುದೊಡ್ಡ ಅಣ್ವಸ್ತ್ರ ಹೊಂದಿದ್ದೇವೆ. ನಮ್ಮ ಮೇಲೆ ಯಾರೂ ದಾಳಿ ಮಾಡಲು ಸಾಧ್ಯವಿಲ್ಲ’ ಎಂದು ಅಣ್ವಸ್ತ್ರ ಪರೀಕ್ಷೆ ವೇಳೆ ವಾಜಪೇಯಿ ಆತ್ಮವಿಶ್ವಾಸದಿಂದ ನುಡಿದಿದ್ದರು.
ಆ ಮೂಲಕ ಭಾರತವನ್ನು ಅಣ್ವಸ್ಥ ರಾಷ್ಟ್ರವಾಗಿಸುವ ಅವರ ಕನಸು ನನಸಾಗಿತ್ತು. ಅವರಿಗಿಂತ ಹಿಂದಿನ ಪ್ರಧಾನಿಗಳು ತೋರದ ಧೈರ್ಯವನ್ನು ತೋರಿದ್ದರು. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತಾಗಿತ್ತು. ಜತೆಗೆ ವಾಜಪೇಯಿ ಆಡಳಿತದಲ್ಲೇ ಕ್ಷಿಪಣಿ ನಿರೋಧಕ ರಕ್ಷಾ ಕವಚವನ್ನು ಭೇದಿಸುವ ಶಬ್ದಕ್ಕಿಂತ ವೇಗವಾಗಿ ಸಾಗುವ ಬ್ರಹ್ಮೋಸ್ ಎಂಬ ಕ್ಷಿಪಣಿಯನ್ನು ರಷ್ಯಾ ಜೊತೆಗೂಡಿ ಅಭಿವೃದ್ಧಿಪಡಿಸಲಾಗಿತ್ತು.
ವಾಜಪೇಯಿಯವರ ಮತ್ತೊಂದು ಕನಸು ’ಚಂದ್ರಯಾನ –1’. ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ನೌಕೆಯನ್ನುಚಂದ್ರನತ್ತ ಕಳುಹಿಸಬೇಕು ಎಂಬುದು ಅವರ ಆಶಯವಾಗಿತ್ತು. 56ನೇ ಸ್ವಾತಂತ್ರ್ಯೋತ್ಸವದ ತಮ್ಮ ಭಾಷಣದಲ್ಲಿ ‘ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿದೆ. ದೇಸಿಯವಾಗಿ ಅಭಿವೃದ್ಧಿಪಡಿಸಿದ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಅಂಗಳಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. 2008ರ ವೇಳೆಗೆ ಭಾರತ ಚಂದ್ರನ ಅಂಗಳಕ್ಕೆ ನೌಕೆಯನ್ನು ಕಳುಹಿಸಲಿದೆ’ ಎಂದು ಹೇಳುವ ಮೂಲಕ ‘ಚಂದ್ರಯಾನ–1’ ಯೋಜನೆಯನ್ನು ಘೋಷಿಸಿದ್ದರು.
*****
ವಾಜಪೇಯಿಯ ಮತ್ತಷ್ಟು ಕನಸುಗಳು
ವಿಜ್ಞಾನ ಕ್ಷೇತ್ರದ ಅಭಿವೃದ್ಧಿ ಕುರಿತು ವಾಜಪೇಯಿಯವರಿಗೆ ಮತ್ತಷ್ಟು ಕನಸುಗಳಿದ್ದವು. ಒಟ್ಟು ಸ್ಥಳೀಯ ಆದಾಯದ (ಜಿಡಿಪಿ) ಶೇ 2 ರಷ್ಟನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ವಿನಿಯೋಗಿಸಬೇಕು. ಈ ಎರಡು ಕ್ಷೇತ್ರಗಳು ಅಧಿಕಾರಶಾಹಿ ರಹಿತವಾಗಿ ರೂಪುಗೊಳ್ಳಬೇಕು. ವಿಜ್ಞಾನ ಸಂಬಂಧಿ ಸಚಿವಾಲಯ ಹಾಗೂ ಇಲಾಖೆಗಳ ಉನ್ನತ ಹುದ್ದೆಗಳಲ್ಲೂ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಅವಕಾಶ ಸಿಗಬೇಕು ಎಂಬ ಆಶಯ ಅವರದಾಗಿತ್ತು. 2003ರಲ್ಲಿ ಬೆಂಗಳೂರಿನಲ್ಲಿ ನಡೆದ 90ನೇ ಅಖಿಲ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಅವರು ಬಿಡುಗಡೆ ಮಾಡಿದ 'ಹೊಸ ವಿಜ್ಞಾನ ನೀತಿ –2003’ಯಲ್ಲಿ ಈ ಎಲ್ಲ ಅಂಶಗಳು ಇದ್ದವು.
‘ದೇಶದಲ್ಲಿರುವ ಪ್ರಾದೇಶಿಕ ಅಸಮತೋಲನವನ್ನು ಕಿತ್ತು ಹಾಕುವ ಶಕ್ತಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿದೆ’ ಎಂದು ಅವರು ಬಲವಾಗಿ ನಂಬಿದ್ದರು. ಆ ಸಮಾವೇಶದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ, ರೈತರ ಕಲ್ಯಾಣ, ಆರೋಗ್ಯ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವಿಜ್ಞಾನ ಸಮುದಾಯ ಒತ್ತುಕೊಡಬೇಕೆಂದು ಕರೆ ನೀಡಿದ್ದರು.
ಪರಿಸರಕ್ಕೆ ಹಾನಿಯಾಗದಂತಹ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸದ್ಭಳಕೆ ಮಾಡಿಕೊಂಡು ‘ಸುಸ್ಥಿರ ಅಭಿವೃದ್ಧಿ’ ಸಾಧಿಸಲು ತಂತ್ರಜ್ಞಾನ ನೆರವಾಗಬೇಕು. ಈ ಹೊಣೆ ವಿಜ್ಞಾನಿಗಳದ್ದು ಎಂದು ಹೇಳಿದ್ದರು. ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ಬೇರೆ ಬೇರೆ ಕ್ಷೇತ್ರಗಳ ಯಶಸ್ಸಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು.
**
ಹೊಸ ವಿಜ್ಞಾನ ನೀತಿಯ ಹರಿಕಾರ
ವಿಜ್ಞಾನ ಕ್ಷೇತ್ರದ ಅಭಿವೃದ್ಧಿ ಕುರಿತು ವಾಜಪೇಯಿಯವರಿಗೆ ಮತ್ತಷ್ಟು ಕನಸುಗಳಿದ್ದವು. ಒಟ್ಟು ಸ್ಥಳೀಯ ಆದಾಯದ (ಜಿಡಿಪಿ) ಶೇ 2 ರಷ್ಟನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ವಿನಿಯೋಗಿಸಬೇಕು. ಈ ಎರಡು ಕ್ಷೇತ್ರಗಳು ಅಧಿಕಾರಶಾಹಿ ರಹಿತವಾಗಿ ರೂಪುಗೊಳ್ಳಬೇಕು. ವಿಜ್ಞಾನ ಸಂಬಂಧಿ ಸಚಿವಾಲಯ ಹಾಗೂ ಇಲಾಖೆಗಳ ಉನ್ನತ ಹುದ್ದೆಗಳಲ್ಲೂ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಅವಕಾಶ ಸಿಗಬೇಕು ಎಂಬ ಆಶಯ ಅವರದಾಗಿತ್ತು. 2003ರಲ್ಲಿ ಬೆಂಗಳೂರಿನಲ್ಲಿ ನಡೆದ 90ನೇ ಅಖಿಲ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಅವರು ಬಿಡುಗಡೆ ಮಾಡಿದ 'ಹೊಸ ವಿಜ್ಞಾನ ನೀತಿ –2003’ಯಲ್ಲಿ ಈ ಎಲ್ಲ ಅಂಶಗಳು ಇದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.