ADVERTISEMENT

ಕೇಂದ್ರ ಸರ್ಕಾರದ ಅಟಲ್‌ ಪಿಂಚಣಿ ಕೆಟ್ಟ ಯೋಜನೆ: ಕಾಂಗ್ರೆಸ್‌ ಟೀಕೆ

ಪಿಟಿಐ
Published 26 ಮಾರ್ಚ್ 2024, 12:17 IST
Last Updated 26 ಮಾರ್ಚ್ 2024, 12:17 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ಕೇಂದ್ರ ಸರ್ಕಾರ ರೂ‍ಪಿಸಿರುವ ಅಟಲ್‌ ಪಿಂಚಣಿ ಯೋಜನೆ (ಎಪಿವೈ) ಅತ್ಯಂತ ಕೆಟ್ಟದ್ದಾಗಿದ್ದು, ಜನರನ್ನು ವಂಚಿಸುವ ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಇದು ನರೇಂದ್ರ ಮೋದಿ ಸರ್ಕಾರದ ನೀತಿ ನಿರೂಪಣೆಗೆ ಸೂಕ್ತ ನಿದರ್ಶನವಾಗಿದ್ದು, ವಾಸ್ತವವಾಗಿ ಕೆಲವೇ ಜನರಿಗೆ ತಲುಪುವ ಯೋಜನೆಯಾಗಿದೆ’ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಅಟಲ್‌ ಪಿಂಚಣಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಿಂದ ಪ್ರತಿ ಮೂರು ಚಂದಾದಾರರ ಪೈಕಿ ಒಬ್ಬರು ಹೊರಬಿದ್ದಿದ್ದಾರೆ. ಈ ಚಂದಾದಾರರ ಅನುಮತಿಯಿಲ್ಲದೆ ಖಾತೆಗಳನ್ನು ತೆರೆದಿದ್ದೇ ಇದಕ್ಕೆ ಕಾರಣ ಎಂದು ಮಾಧ್ಯವವೊಂದರ ವರದಿಯನ್ನು ಉಲ್ಲೇಖಿಸಿ ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಭಾರತೀಯ ಸಾಮಾಜಿಕ ವಿಜ್ಞಾನ ಅನುಸಂಧಾನ ಪರಿಷತ್ತಿನ (ಐಸಿಎಸ್‌ಎಸ್‌ಆರ್‌) ಅಧ್ಯಯನವನ್ನು ವರದಿ ಪ್ರಸ್ತಾಪಿಸಿದೆ.

ADVERTISEMENT

ಇದರಲ್ಲಿ ಶೇ 83ರಷ್ಟು ಚಂದಾದಾರರು ಕಡಿಮೆ ಸ್ಲ್ಯಾಬ್‌ ಅಂದರೆ ₹ 1,000 ಪಿಂಚಣಿಯವರು. ಏಕೆಂದರೆ ಇದಕ್ಕೆ ಮಾಸಿಕ ಕೊಡುಗೆ ಕಡಿಮೆ ಇದೆ ಮತ್ತು ಅದು ಫಲಾನುಭವಿಗಳ ಗಮನಕ್ಕೂ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಇದು ಸ್ಥಿರ ಆದಾಯದ ಪಿಂಚಣಿ ಆಗಿರುವುದರಿಂದ, ಆದಾಯದ ಮೊತ್ತವೂ ಆಕರ್ಷಕವಾಗಿಲ್ಲ. ಅಲ್ಲದೆ ಏರುತ್ತಿರುವ ಬೆಲೆಗಳೊಂದಿಗೆ ಅದು ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂದು ರಮೇಶ್‌ ದೂರಿದ್ದಾರೆ.

ಎಪಿವೈ ಭಾರತದ ಅಸಂಘಟಿತ ವಲಯದ ಕಾರ್ಮಿಕರನ್ನು ಕೇಂದ್ರೀಕರಿಸಿ ರೂಪಿಸಲಾಗಿರುವ ಯೋಜನೆ. ಇದರಡಿ ಖಾತರಿಪಡಿಸಿದ ಕನಿಷ್ಠ ಪಿಂಚಣಿ ತಿಂಗಳಿಗೆ ₹1,000ದಿಂದ ₹5,000ದವರೆಗೆ 60 ವರ್ಷ ಮೀರಿದ ಚಂದಾದಾರರಿಗೆ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.